ದೇಶ/ವಿದೇಶರಾಜ್ಯಸುದ್ದಿ

ರೀಲ್ಸ್ ಸ್ಟೋರಿ ರಿಯಲ್ ಆಯಿತು ..?ಮಗಳ ಕಣ್ಣೆದುರೇ ಹೊರಟುಹೋಯಿತು ತಾಯಿ ಜೀವ!

ಉತ್ತರ ಪ್ರದೇಶ: ಬಂಡಾ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದ ವ್ಯಾಮೋಹಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ಭರದಲ್ಲಿ 27 ವರ್ಷದ ಮೋಹಿನಿ ಎಂಬ ಯುವತಿ ಆಕಸ್ಮಿಕವಾಗಿ ನೇಣಿಗೆ ಶರಣಾಗಿದ್ದಾರೆ. ನಟನೆಯ ಪ್ರೇಮವೇ ಆಕೆಗೆ ಮರಣದ ಉರುಳಾಗಿ ಪರಿಣಮಿಸಿದ್ದು, ಒಂದು ಸಣ್ಣ ಅಜಾಗರೂಕತೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೋಹಿನಿ ಸ್ಟೂಲ್ ಮೇಲೆ ನಿಂತು ಕುತ್ತಿಗೆಗೆ ಕುಣಿಕೆ ಹಾಕಿಕೊಂಡು ಆತ್ಮಹತ್ಯೆಯ ದೃಶ್ಯವೊಂದನ್ನು ಅಭಿನಯಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಆಕೆಯ ಕಾಲು ಸ್ಟೂಲ್‌ನಿಂದ ಜಾರಿದೆ. ಕ್ಷಣಾರ್ಧದಲ್ಲಿ ಕುಣಿಕೆ ಬಿಗಿಯಾದ ಪರಿಣಾಮ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಭೀಕರ ದೃಶ್ಯವನ್ನು ಆಕೆಯ ನಾಲ್ಕು ವರ್ಷದ ಪುಟ್ಟ ಮಗಳು ಕಣ್ಣಾರೆ ಕಂಡಿದ್ದು, ಗಾಬರಿಗೊಂಡು ಕಿರುಚಾಡಿದ್ದಾಳೆ. ಬಾಲಕಿಯ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೋಹಿನಿ ಕಾಣಿಸಿದ್ದಾಳೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಇದು ರೀಲ್ಸ್ ಮಾಡುವಾಗ ಸಂಭವಿಸಿದ ಅಪಘಾತ ಎಂದು ತಿಳಿದುಬಂದಿದ್ದರೂ, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲೈಕ್ ಮತ್ತು ವ್ಯೂಸ್ ಗಳಿಸುವ ಹುಚ್ಚಾಟದಲ್ಲಿ ಜನರು ಪ್ರಾಣವನ್ನೇ ಪಣಕ್ಕಿಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

Comments (0)

Your email address will not be published. Required fields are marked *

Back to top button