ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಈಗಾಗಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್ನ ಭಿನ್ನಮತೀಯರು ಸಭೆ ನಡೆಸಿದ್ದು, ಅಸಮಾಧಾನವನ್ನ ಬಹಿರಂಗವಾಗೇ ಸ್ಫೋಟಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಬಹಿರಂಗವಾಗೇ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರದ ನಂದಿಕ್ರಾಸ್ ಹತ್ತಿರ ಖಾಸಗಿ ತೋಟವೊಂದರಲ್ಲಿ ಇದೇ 13ರಂದು 100ಕ್ಕೂ ಹೆಚ್ಚು ಅತೃಪ್ತ ನಾಯಕರು ಸಭೆ ಸೇರಿದ್ರು.. ಈ ವೇಳೆ ನಮ್ಮನ್ನು ಕಡೆಗಣಿಸಿದ್ರೆ ಪಕ್ಷಕ್ಕೆ ಉಳಿಗಾಲವಿಲ್ಲ ಅಂತ ಎಚ್ಚರಿಸಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ ನಡೆದಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚುವ ಮೂಲಕ ಸಂಘಟನೆಯಲ್ಲಿ ಬಲವಿಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ ಎಂಬುದನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ.
ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರುಗಳು ನೂರಕ್ಕೂ ಹೆಚ್ಚು ಮಂದಿ ಮಂಗಳವಾರ ಗುಪ್ತ ಸಭೆ ನಡೆಸುವ ಮೂಲಕ ಸಭೆಯಲ್ಲಿ ಸ್ಥಳೀಯ ಶಾಸಕರು, ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಡಾ. ಕೆ.ಸುಧಾಕರ್ ಅವರನ್ನು ಶತಾಯಗತಾಯ ಸೋಲಿಸಲೇಬೇಕು ಎಂದು ರಾಜಕೀಯಕ್ಕೆ ಮೊದಲ ಬಾರಿ ಕಾಲಿಟ್ಟು ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಪ್ರದೀಪ್ ಈಶ್ವರ್ ಸ್ಪರ್ಧಿಸಿದ್ದರು. ಪ್ರದೀಪ್ ಈಶ್ವರ್ರನ್ನು ಇದೇ ಕಾಂಗ್ರೆಸ್ ಮುಖಂಡರುಗಳು ಹಗಲಿರುಳು ಶ್ರಮಿಸಿ ಗೆಲ್ಲಿಸಿದ್ದರು. ಆದ್ರೆ ಇದು ಈಗ ನಿರರ್ಥಕ ಅನಿಸುತ್ತಿದೆ ಅಂತ ಮುಖಂಡ ಮಿಲ್ಟನ್ ವೆಂಕಟೇಶ್ ಈಗ ಬೇಸರ ಹೊರಹಾಕುತ್ತಿದ್ದಾರೆ.
ಈ ಅತೃಪ್ತರ ಸಭೆಯಲ್ಲಿ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಂದಿ ಎಂ ಆಂಜನಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಚೇನಹಳ್ಳಿ ಪ್ರಕಾಶ್, ಮಂಡಿಕಲ್ ಕಾಂಗ್ರೆಸ್ ಮುಖಂಡ ಅಜಿತ್ ಪ್ರಸಾದ್, ಕೆಪಿಸಿಸಿ ಮಾಜಿ ಸದಸ್ಯ, ಮಾಜಿ ಶಾಸಕ ಎಸ್ ಎಂ ಮುನಿಯಪ್ಪ, ಲಾಯರ್ ನಾರಾಯಣ ಸ್ವಾಮಿ, ಅಡ್ಡಗಲ್ ಗ್ರಾಮ ಪಂಚಾಯತ್ ಸದಸ್ಯ ಎನ್.ವಿ.ಶಂಕರ್, ನಗರ ಸಭೆ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್, ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ವಿ ರಾಜೇಶ್, ಕೋಚಿ ಮುಲ್ ಮಾಜಿ ನಿರ್ದೇಶಕ ಭರಣಿ ವೆಂಕಟೇಶ್ ಒಳಗೊಂಡಂತೆ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಿದ್ದರು.