ಹುಬ್ಬಳ್ಳಿ: ಆರ್‌ಸಿಬಿ ಟಿ20 ಆಡೋಕೆ ಮಾತ್ರ ಚೆನ್ನಾಗಿರುತ್ತೆ. ಆದರೆ ನಾನು ಟೆಸ್ಟ್ ಮ್ಯಾಚ್ ಆಡೋಕೆ ಬಂದವನು. ಲಂಬಿ ರೇಸ್ ಕಾ ಗೋಡಾ ಹು ನೋಡೋಣ ಎಂದು ತಮ್ಮ ವಿರೋಧಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ಬಿಟ್ಟೋದವರು ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಯೋಗ್ಯತೆ ಕಳೆದುಕೊಂಡಿದ್ದಾರೆ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ ವಿಜಯೇಂದ್ರ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕೆಲಸ ಮಾಡಲು ಭಗವಂತ ಬುದ್ದಿ ನೀಡಿದ್ದಾನೆ. ಆ ಕಾರ್ಯ ಮಾಡುವೆ. ನಾನು ಯಾರ ಹೇಳಿಕೆ ಗಂಭೀರವಾಗಿ ಪರಿಗಣಿಸಲ್ಲ, ನೋವು ಮಾಡಿಕೊಳ್ಳಲ್ಲ. ಲೋಕಸಭಾ ಚುನಾವಣೆಯಲ್ಲಿ ಕೆಲವರನ್ನು ಪಕ್ಷದಿಂದ ಹೊರಹಾಕಿದ್ದೇವೆ. ಈಗಾಗಲೇ ಶುದ್ಧೀಕರಣ ಆಗಿದೆ ಎಂದರು.

ಬಿಜೆಪಿ ಉಚ್ಛಾಟಿಯ ನಾಯಕ ಕೆಎಸ್​ ಈಶ್ವರಪ್ಪ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​, ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸಿಡಿದೆದ್ದಿದ್ದು, ಹೇಗಾದರೂ ಮಾಡಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ತೊಡೆತಟ್ಟಿದ್ದಾರೆ. ಹೀಗಾಗಿ ಯತ್ನಾಳ್​, ಬಿಎಸ್​ವೈ ಕುಟುಂಬದ ವಿರೋಧಿ ನಾಯಕರನ್ನು ಭೇಟಿ ಮಾಡಿ ತಂಡ ಕಟ್ಟಲು ಮುಂದಾಗಿದ್ದಾರೆ. ಇದಕ್ಕೆ ಈಶ್ವರಪ್ಪ ಸಹ ಕೈಜೋಡಿಸಿದ್ದು, ರಾಯಣ್ಣ, ಚೆನ್ನಮ್ಮ ಬ್ರಿಗೇಡ್ ಸಂಘಟನೆ ಮಾಡಿಕೊಂಡು ಬಿಎಸ್​ವೈ ಕುಟುಂಬದ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ.

ಈಗಾಗಲೇ ಯತ್ನಾಳ್ ಅಸಮಾಧಾನಿತ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ. ಬೆಳಗಾವಿ, ಬೆಂಗಳೂರು, ದಾವಣಗೆರೆಯಲ್ಲಿ ಅಸಮಾಧಾನಿತ ನಾಯಕರು ಒಟ್ಟಿಗೆ ಸೇರಿ ಸಭೆ ಸಹ ಮಾಡಿದ್ದಾರೆ.

ಹಿಂದುಳಿದ, ದಲಿತ ಸೇರಿದಂತೆ ಎಲ್ಲ ಸಮಾಜದವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯಾಗಲು ಸಾಧು-ಸಂತರ ನೇತೃತ್ವದಲ್ಲಿ ನೂತನ ಸಂಘಟನೆಯನ್ನು ಹುಟ್ಟುಹಾಕಲು ಚಿಂತಿಸಲಾಗಿದೆ. ಅ. 20ರಂದು ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights