ಬೆಂಗಳೂರು,ಮೇ.24 ; ಕಳೆದ ಐದು ದಿನಗಳ ಹಿಂದೆ ಫಾರಂ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿಗೆ ಸಂಬಂಧಪಟ್ಟಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಎಎಸ್ಐ ಸೇರಿ ಮೂವರು ಪೊಲೀಸರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಮೇಲೆ ಠಾಣೆಯ ಎಸ್.ಬಿ. ಗಿರೀಶ್, ಎಎಸ್ಐ ನಾರಾಯಣ ಸ್ವಾಮಿ,ಗಸ್ತು ಸಿಬ್ಬಂದಿ ಕಾನ್ಸ್‌ಟೇಬಲ್ ದೇವರಾಜು ಸೇರಿ ಮೂವರನ್ನು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಚಾರ್ಜ್ ಮೆಮೋ ನೀಡಿದ್ದು, ಇಷ್ಟೆಲ್ಲ ಆಗುತ್ತಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೆ ಕಾರಣ ನೀಡಿ ಎಂದು ವಿವರಣೆಯನ್ನು ಕೇಳಿದ್ದಾರೆ. ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ಅವರ ಉತ್ತರ ಆಧರಿಸಿ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಸಿಸಿಬಿ ಪೊಲೀಸರಿಗೆ ಸಿಕ್ಕ ಮಾಹಿತಿ ಸ್ಥಳೀಯ ಪೊಲೀಸರಿಗೆ ಯಾಕೆ ಇರಲಿಲ್ಲ ಎಂದು ಪ್ರಶ್ನೆ ಮಾಡಲಾಗಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.


