ಧುವನ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸುತ್ತಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸುತ್ತಿರುವ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಈ ಸುಂದರ ಪ್ರೇಮ ಕಥಾನಕಕ್ಕೆ “ರಾಶಿ” ಎಂದು ಹೆಸರಿಡಲಾಗಿದೆ. ಆದಿತ್ಯ ಶಶಿಕುಮಾರ್ ಅವರ ಹುಟ್ಟುಹಬ್ಬದ ದಿನವೇ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡುವ ಮೂಲಕ ನಾಯಕನಿಗೆ ಚಿತ್ರತಂಡ ವಿಶೇಷ ಉಡುಗೊರೆ ನೀಡಿದೆ. ರಾಜ್ಯಸಭಾ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಯಾಧ್ಯಕ್ಷರಾದ ಜಿ.ಎಸ್.ಚಂದ್ರಶೇಖರ್, ನಟ ಶಶಿಕುಮಾರ್, ಬೆಂಗಳೂರು ಪೊಲೀಸ್ ಉಪ ಆಯುಕ್ತರಾದ ಸಿದ್ದರಾಜು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಎಸ್ ಚಿದಂಬರ್ ಸೇರಿದಂತೆ ಮುಂತಾದ ಗಣ್ಯರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಆನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದು ನಾನು ನಾಯಕನಾಗಿ ನಟಿಸುತ್ತಿರುವ ಮೂರನೇ ಚಿತ್ರ‌ ಎಂದು ಮಾತನಾಡಿದ ನಾಯಕ ಆದಿತ್ಯ ಶಶಿಕುಮಾರ್, ಈ ಚಿತ್ರದ ಕಥೆ ಬಹಳ ಚೆನ್ನಾಗಿದೆ. ನನ್ನ ಹುಟ್ಟುಹಬ್ಬದ ದಿನ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದ್ದು ಖುಷಿಯಾಗಿದೆ. ಇಷ್ಟು ದಿನ ಅಕ್ಷಿತ್ ಶಶಿಕುಮಾರ್ ಆಗಿದ್ದ ನಾನು, ಈಗ ಆದಿತ್ಯ ಶಶಿಕುಮಾರ್ ಎಂದು ಹೆಸರು ಬದಲಿಸಿಕೊಂಡಿದ್ದೇನೆ. ಇನ್ನು ಮುಂದೆ ಎಲ್ಲರೂ ಆದಿತ್ಯ ಶಶಿಕುಮಾರ್ ಎಂದೇ ಕರೆಯಬೇಕೆಂದು ವಿನಂತಿಸುತ್ತೇನೆ ಎಂದರು.

ಮಂತ್ರಾಲಯದಲ್ಲಿ ರಾಯರ ದರ್ಶನ ಮುಗಿಸಿಕೊಂಡು ಬರುವಾಗ ನಿರ್ಮಾಪಕ ಅಖಿಲೇಶ್ ಅವರು ನನ್ನನ್ನು ಕರೆದು ಈ ಚಿತ್ರವನ್ನು ನಿರ್ದೇಶಿಸಬೇಕೆಂದರು. ಅಖಿಲೇಶ್ ಅವರೆ ಈ ಚಿತ್ರದ ಕಥೆ ಬರೆದಿದ್ದಾರೆ. ನಾನು ಚಿತ್ರಕಥೆ, ಬರೆದು, ಗೀತರಚನೆ ಮಾಡಿ, ಸಂಗೀತ ನಿರ್ದೇಶನದೊಂದಿಗೆ ನಿರ್ದೇಶನನ್ನು ಮಾಡುತ್ತಿದ್ದೇನೆ. “ಟ್ರಿಗರ್” ಚಿತ್ರದ ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಇನ್ನು ಈ ಚಿತ್ರಕ್ಕೆ ಅಭಿನಂದನ್ ದೇಶಪ್ರಿಯ ಸಂಭಾಷಣೆ, ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ‌, ಮಂಜು ಮಹದೇವ್ ಹಿನ್ನೆಲೆ ಸಂಗೀತ ಹಾಗೂ ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿದೆ. ಇತ್ತೀಚಿಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆದಿದೆ. ಈ ಪ್ರೇಮ ಕಥಾನಕಕ್ಕೆ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ವಿಜಯ್ ಪಾಳೇಗಾರ್ ತಿಳಿಸಿದರು.

ಚಿತ್ರದ ನಾಯಕಿ ಸಮೀಕ್ಷ, ನಿರ್ಮಾಪಕ ಅಖಿಲೇಶ್, ಕಲಾವಿದರಾದ ಕರಿಸುಬ್ಬು, ಉಗ್ರಂ ರವಿ, ಹುಲಿ ಕಾರ್ತಿಕ್ ಮುಂತಾದವರು “ರಾಶಿ” ಚಿತ್ರದ ಬಗ್ಗೆ ‌ಮಾತನಾಡಿದರು.

Leave a Reply

Your email address will not be published. Required fields are marked *

Verified by MonsterInsights