ಒಡಿಶಾ: ಜಗತ್ಸಿಂಗ್‌ಪುರದಲ್ಲಿ ಮಾನವೀಯತೆಯೇ ಮಕಾಡೆ ಮಲಗುವಂತಹ ಘೋರ ಕೃತ್ಯವೊಂದು ನಡೆದಿದೆ. ಮದುವೆಯಾಗುವ ಆಸೆಯಿಂದ ಮನೆ ಬಿಟ್ಟು ಬಂದ ಯುವತಿಯೊಬ್ಬಳು ಅಕ್ಷರಶಃ ಕಾಮಪಿಶಾಚಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ಪ್ರೀತಿಸಿದವನಿಂದಲೇ ಶುರುವಾದ ಈ ನಂಬಿಕೆದ್ರೋಹದ ಕಥೆ, ಸಹಾಯದ ಹೆಸರಲ್ಲಿ ಬಂದ ಅಪರಿಚಿತನ ಕ್ರೌರ್ಯದೊಂದಿಗೆ ರಕ್ತಸಿಕ್ತವಾಗಿ ಅಂತ್ಯಗೊಂಡಿದೆ.
ಮದುವೆಯಾಗುವ ಭರವಸೆ ನೀಡಿದ್ದ ಪ್ರಿಯಕರನ ಮಾತು ನಂಬಿ ಯುವತಿ ದೇವಸ್ಥಾನಕ್ಕೆ ಬಂದಿದ್ದಳು. ಅಲ್ಲಿಂದ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಪ್ರಿಯಕರ, ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಾಮದ ಹಸಿವು ತೀರಿಸಿಕೊಂಡ ಬಳಿಕ ಆಕೆಯನ್ನು ಅನಾಥವಾಗಿ ಬಸ್ ನಿಲ್ದಾಣದ ಬಳಿ ಬಿಟ್ಟು ಪರಾರಿಯಾಗಿದ್ದಾನೆ. ಪ್ರಿಯಕರನಿಂದಲೇ ವಂಚನೆಗೊಳಗಾಗಿ ಕಂಗೆಟ್ಟಿದ್ದ ಯುವತಿಗೆ ವಿಧಿಯ ಆಟ ಅಲ್ಲಿಗೂ ಮುಗಿದಿರಲಿಲ್ಲ.
ಬಸ್ ನಿಲ್ದಾಣದಲ್ಲಿ ಅಸಹಾಯಕಳಾಗಿ ಕುಳಿತಿದ್ದ ಯುವತಿಯ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ಸಹಾಯ ಮಾಡುವ ನಾಟಕವಾಡಿದ್ದಾನೆ. ಆಕೆಯ ಪರಿಸ್ಥಿತಿಯ ದುರ್ಲಾಭ ಪಡೆದ ಆತ, ಆಕೆಯನ್ನು ಏಕಾಂತ ಪ್ರದೇಶಕ್ಕೆ ಕರೆದೊಯ್ದು ಮತ್ತೆ ಅತ್ಯಾಚಾರವೆಸಗಿದ್ದಾನೆ. ಅಷ್ಟಕ್ಕೇ ನಿಲ್ಲದ ಆತನ ವಿಕೃತಿ, ಯುವತಿಯನ್ನು ಮಹಡಿಯ ಮೇಲಿನಿಂದ ಕೆಳಕ್ಕೆ ತಳ್ಳಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಒಡಿಶಾದ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದು, ಕಾಮಪಿಶಾಚಿಗಳ ಅಟ್ಟಹಾಸಕ್ಕೆ ಅಮಾಯಕ ಜೀವವೊಂದು ಬಲಿಯಾಗಿದೆ.


