Top Newsರಾಜ್ಯಸುದ್ದಿ

ಮಂಗಳೂರು: ಅನೈತಿಕ ಚಟುವಟಿಕೆಯ ಮಸಾಜ್ ಸೆಂಟರ್‌ ಮೇಲೆ ರಾಮ ಸೇನೆ ಕಾರ್ಯಕರ್ತರಿಂದ ದಾಳಿ

ಮಂಗಳೂರು: ನಗರದ ಬಿಜೈ ಕೆಎಸ್ಆರ್‌ಟಿಸಿ ಬಳಿ‌ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್‌ಗೆ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿ, ಪಾರ್ಲರ್​​ನ ಗಾಜು, ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಗುರುವಾರ ನಡೆದಿದೆ.

ಮಸಾಜ್ ಸೆಂಟರ್​ನ ಗಾಜುಗಳನ್ನು ಪುಡಿಗೈದು ರಾಮ ಸೇನಾ ಸಂಘಟೆನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್​ಗಳ‌ನ್ನು ಮುಚ್ಚುವಂತೆ ರಾಮ ಸೇನಾ ಆಗ್ರಹಿಸಿದ್ದಾರೆ.

ರಾಮ ಸೇನೆ ಕಾರ್ಯಕರ್ತರು ಮಸಾಜ್ ಸೆಂಟರ್ ನ ಗಾಜುಗಳನ್ನು ಪುಡಿಗೈದು, ಪೀಠೋಪಕರಣ ಮತ್ತು ಕಂಪ್ಯೂಟರ್ ಗಳನ್ನು ಧ್ವಂಸಗೊಳಿಸಿದ್ದು, ಅಲ್ಲಿದ್ದ ಕೆಲವು ಹುಡುಗಿಯರಿಗೆ ನೀವು ವೈಶಾವಾಟಿಕೆ ದಂಧೆ ನಡೆಸುತ್ತಿದ್ದೀರಿ ಎಂದು ಆವಾಜ್ ಹಾಕಿದ್ದಾರೆ. ಈ ವೇಳೆ ಹುಡುಗಿಯರು ಕೈಮುಗಿದು ನಮ್ಮ ಮೇಲೆ ಹಲ್ಲೆ ಮಾಡಬೇಡಿ ಎಂದು ಬೇಡಿಕೊಳ್ಳುವ ವಿಡಿಯೋ ವೈರಲ್ ಆಗಿದೆ.

ಘಟನೆಯ ಸಮಯದಲ್ಲಿ ಇಬ್ಬರು ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ. ಒಳಗೆ ನುಗ್ಗಿದವರಲ್ಲಿ ಒಬ್ಬರು ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆ ಬಗ್ಗೆ ಮಾತನಾಡಿದ, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಇಂದು ಬೆಳಗ್ಗೆ 11:51ರ ಸುಮಾರಿಗೆ, ಬಿಜೈನ ಆದಿತ್ಯ ಕಾಂಪ್ಲೆಕ್ಸ್ ಬಳಿಯ ಕಲರ್ಸ್ ಯುನಿಸೆಕ್ಸ್ ಸಲೂನ್​ಗೆ 9ರಿಂದ 10 ಜನರ ಅಪರಿಚಿತ ವ್ಯಕ್ತಿಗಳ ಗುಂಪು ಅಕ್ರಮವಾಗಿ ಪ್ರವೇಶಿಸಿ ಆಸ್ತಿಗೆ ಹಾನಿ ಉಂಟುಮಾಡಿದೆ. ಸಿಬ್ಬಂದಿ ಮೇಲೆ ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಅವರಿಗೆ ಮತ್ತಷ್ಟು ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ ಎಂದ್ರು.

ಈ ವಿಚಾರದ ಬಗ್ಗೆ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್

ಯಾವ ಉದ್ದೇಶಕ್ಕೆ ದಾಳಿಯಾಗಿದೆ ಗೊತ್ತಿಲ್ಲ. ದಾಳಿ ಮಾಡಿದವರನ್ನು ತಕ್ಷಣ ಬಂಧಿಸಲು ಸೂಚಿಸಿದ್ದೇನೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದೇನೆ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು. ಪ್ರತಿಯೊಬ್ಬರಿಗೂ ಕೆಲಸ ಮಾಡಿಕೊಳ್ಳುವ ಹಕ್ಕಿದೆ. ಯಾರು ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು. ದಾಳಿ ಮಾಡಿದವರು ಯಾರು ಎಂದು ಗುರುತಿಸುತ್ತೇವೆ. ಏನು ಕ್ರಮ ತೆಗೆದುಕೊಳ್ಳಬೇಕು ಇಲಾಖೆ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

Comments (0)

Your email address will not be published. Required fields are marked *

Back to top button