Thursday, November 20, 2025
19.9 C
Bengaluru
Google search engine
LIVE
ಮನೆ#Exclusive NewsTop Newsಹರೀಶ್ ಪೂಂಜಾ ಗೂಂಡಾ ಎಂದ ರಾಜೇಗೌಡ: ವಿಧಾನಸಭೆಯಲ್ಲಿ ಗದ್ದಲ

ಹರೀಶ್ ಪೂಂಜಾ ಗೂಂಡಾ ಎಂದ ರಾಜೇಗೌಡ: ವಿಧಾನಸಭೆಯಲ್ಲಿ ಗದ್ದಲ

ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ಷೇಪ ವಿರೋಧಿಸುವ ಭರದಲ್ಲಿ ಶಾಸಕ ರಾಜೇಗೌಡ ಅವರು ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಗೂಂಡಾ ಎಂದು ಕರೆದಿದ್ದು, ಭಾರೀ ಗದ್ದಲಕ್ಕೆ ಕಾರಣವಾಯಿತು.

ವಿಧಾನಸಭೆಯ ಸಭಾಂಗಣದಲ್ಲಿ ಸಂವಿಧಾನದ ಪೀಠಿಕೆ ಅಳವಡಿಸಿರುವ ಕುರಿತಾಗಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ಯು.ಟಿ ಖಾದರ್‍ಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಸಂವಿಧಾನ ಪರ ಯಾರು ವಿರುದ್ಧ ಯಾರು ಎಂಬ ಬಗ್ಗೆ ಎರಡು ಕಡೆಯವರು ಆರೋಪ ಪ್ರತ್ಯಾರೋಪ ನಡೆಸಿದರು. ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಕಾಂಗ್ರೆಸ್ ಸದಸ್ಯರಾದ ಕೆ.ಜೆ ಜಾರ್ಜ್ ಹಾಗೂ ಇತರರ ನಡುವೆ ಆರೋಪ ಪ್ರತ್ಯಾರೋಪ ನಡೆಯಿತು. ತುರ್ತುಪರಿಸ್ಥಿತಿ ಜಾರಿಗೊಳಿಸುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್ ಎಂದು ಬಿಜೆಪಿ ಆರೋಪ ಮಾಡಿದರೆ, ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಖಾದರ್, ಗುಜರಾತ್ ನಿಂದ ಕರ್ನಾಟಕದ ಕರಾವಳಿಯವರೆಗೆ ಸ್ಮಗ್ಲರ್‌ಗಳು ಆಳುತ್ತಿದ್ದರು. ಆದರೆ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕರೀಂ ಲಾಲ, ಹಾಜಿ ಮಸ್ತಾನ್ ಸೇರಿದಂತೆ ಸ್ಮಗ್ಲರ್‌ಗಳನ್ನು ಜೈಲಿಗೆ ಹಾಕಿದ್ದು ತುರ್ತುಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿಯವರು. ಈ ನಿಟ್ಟಿನಲ್ಲಿ ತುರ್ತುಪರಿಸ್ಥಿತಿ ಸಾಧಕ ಬಾಧಕ ಬಗ್ಗೆ ಚರ್ಚೆ ಆಗಲಿ ಎಂದರು. ಇದಕ್ಕೆ ಆರಗ ಜ್ಞಾನೇಂದ್ರ ಆಕ್ಷೇಪ ವ್ಯಕ್ತಪಡಿಸಿ, ಸಂವಿಧಾನದ ಮೇಲೆ ಅತ್ಯಾಚಾರ ಮಾಡಿದ್ದು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ. ಹಾಗಾಗಿ ಸಮರ್ಥನೆ ಮಾಡಬಾರದು. ನಾವು ಜೈಲಿನಲ್ಲಿ ಇದ್ದೆವು. ಸಾಮಾನ್ಯ ಜನರಿಗೆ ಕಿರುಕುಳ ಆಗಿದೆ. ಎಳೆದುಕೊಂಡು ಹೋಗಿ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದರು ಎಂದರು. ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ತಾವು ಆ ಸ್ಥಾನದಲ್ಲಿ ಕುಳಿತುಕೊಂಡು ಈ ಹೇಳಿಕೆ ಕೊಟ್ಟರೆ ಅದು ಸಮರ್ಥನೆ ಮಾಡಿದಂತೆ ಆಗುತ್ತದೆ. ಇಲ್ಲಿ ಕುಳಿತುಕೊಂಡರೆ ವಾದ ವಿವಾದ ಮಾಡಬಹುದು ಎಂದರು.

ಇದೇ ವೇಳೆ ಕೆ.ಜೆ.ಜಾರ್ಜ್ ಮಾತನಾಡಿ, ವಿರೋಧ ಪಕ್ಷದಲ್ಲಿ ಇದ್ದು ಸಂವಿಧಾನಬಾಹಿರ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಬೇಕಲ್ಲ. ತುರ್ತುಪರಿಸ್ಥಿತಿ ಬಳಿಕವೂ ಇಂದಿರಾ ಗಾಂಧಿಯನ್ನು ಜನರು ಪ್ರಧಾನಿ ಮಾಡಿದರು. ನೀವು ಸಂವಿಧಾನ ಇರಲೇಬಾರದು ಎನ್ನುವವರು, ಇವಾಗ ಸಂವಿಧಾನದ ಬಗ್ಗೆ ಮಾತನಾಡ್ತಿರಾ? ನೀವು ಸಂವಿಧಾನದ ವಿರೋಧಿಗಳು. ಜನ ಸರಿಯಾದ ಬುದ್ಧಿ ಕಲಿಸಿದ್ದಾರೆ. ಅದಕ್ಕೆ ಇವಾಗ ಸುಮ್ಮನಿದ್ದೀರಿ. ಇಂದಿರಾಗಾಂಧಿ ವಿಚಾರ ಮಾತನಾಡಲು ಯಾವ ರೀತಿಯ ಯೋಗ್ಯತೆ ಇದೆ? ಅವರು ದೇಶಕ್ಕೆ ಪ್ರಾಣ ಕೊಟ್ಟವರು. ನಿಮ್ಮ ಕೈಯಿಂದ ಏನು ಮಾಡಲು ಆಗಲ್ಲ ಜನ ನಿಮಗೆ ಬುದ್ಧಿ ಕಲಿಸಿದ್ದಾರೆ ಎಂದರು. ಈ ವೇಳೆ ಕಾಂಗ್ರೆಸ್ ಸದಸ್ಯ ರಾಜೇಗೌಡ ಅವರು ಬಿಜೆಪಿ ಸದಸ್ಯರ ಆಕ್ಷೇಪ ವಿರೋಧಿಸುವ ಭರದಲ್ಲಿ ಹರೀಶ್ ಪೂಂಜಾಗೆ ಗೂಂಡಾ ಎಂದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯ್ತು. ಶಾಸಕರನ್ನು ರಾಜೂಗೌಡರು ಯಾವ ರೀತಿಯಲ್ಲಿ ಗೂಂಡಾ ಅಂತಾರೆ? ಎರಡು ಬಾರಿ ಶಾಸಕರಾದವರನ್ನು ಗೂಂಡಾ ಎನ್ನುತ್ತಾರೆ. ಅದಕ್ಕೆ ಕ್ಷಮೆ ಕೇಳಬೇಕು. ಶಾಸಕರಿಗೆ ಗೂಂಡಾ ಎಂದು ಹೇಗೆ ಕರೆಯುತ್ತಾರೆ? ಎಂದು ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್ ಅವರು ಸದನವನ್ನು ಕೆಲ ಕಾಲ ಮುಂದೂಡಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments