ಬೆಂಗಳೂರು: ಸಹಕಾರ ಸಚಿವ ಕೆ.ಎನ್ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ಇನ್ನು ಸಹಕಾರ ಸಚಿವ ಕೆ.ಎನ್ ರಾಜಣ್ಣ ರಾಜೀನಾಮೆ ಬಗ್ಗೆ ಫ್ರೀಡಂ ಟಿವಿ ಬೆಳಗ್ಗೆಯೇ ವರದಿಯನ್ನು ಬಿತ್ತರಿಸಿತ್ತು. ಇದೀಗ ಸಚಿವ ಕೆ.ಎನ್ ರಾಜಣ್ಣ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾಯಕತ್ವ ಬದಲಾವಣೆ, ಚುನಾವಣಾ ಆಯೋಗದ ವಿರುದ್ಧದ ರಾಹುಲ್ ಗಾಂಧಿ ಆರೋಪದ ಕುರಿತು ಪಕ್ಷಕ್ಕೆ ಮುಜುಗರ ಉಂಟಾಗುವ ರೀತಿಯ ಹೇಳಿಕೆಯನ್ನು ಕೆ.ಎನ್ ರಾಜಣ್ಣ ನೀಡುತ್ತಿದ್ದರು. ಈ ಹಿನ್ನೆಲೆ ಹೈಕಮಾಂಡ್ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿ ನಡೆಯಲಿದೆ ಎಂದು ಕೆ.ಎನ್ ರಾಜಣ್ಣ ಹೇಳಿದ್ದರು. ಅಷ್ಟೇ ಅಲ್ಲದೇ ಪಕ್ಷದಲ್ಲಿ ಹಿರಿಯ ನಾಯಕರ ಎಚ್ಚರಿಕೆಯ ಹೊರತಾಗಿಯೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರವಾಗಿ ಪದೇ ಪದೇ ಮಾತನಾಡುತ್ತಿದ್ದು ಹೈಕಮಾಂಡ್ ಕೆಂಗಣ್ಣಿಗೆ ಕೂಡಾ ಗುರಿಯಾಗಿದ್ದರು.
ಇದೀಗ ಲೋಕಸಭೆ ಚುನಾವಣೆ ವೇಳೆ ಬೆಂಗಳೂರಿನ ಕೇಂದ್ರ ಲೋಕಸಭಾ ವ್ಯಾಪ್ತಿಯ ಮಹದೇವಪುರ ಸೇರಿದಂತೆ ದೇಶದ ಹಲವು ಕಡೆ ಮತಗಳ್ಳತನ ನಡೆದಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪದ ಬಗ್ಗೆ ಚರ್ಚೆಯಾಗುತ್ತಿದ್ದಾಗ ರಾಜಣ್ಣ ಪಕ್ಷಕ್ಕೆ ಮುಜುಗರ ಉಂಟಾಗುವಂತೆ ಕಾಂಗ್ರೆಸ್ ಅಧಿಕಾರಾವಧಿಯಲ್ಲೇ ಚುನಾವಣೆ ಮತದಾನದಲ್ಲಿ ಅಕ್ರಮವಾಗಿದೆ ಎನ್ನುವ ಮೂಲಕ ಮುಖಭಂಗ ಉಂಟು ಮಾಡಿದ್ದರು.