ಆಳಂದ ಮತಗಳ್ಳತನದ ಬಗ್ಗೆ ರಾಹುಲ್ ಸ್ಫೋಟಕ ಆರೋಪ

ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಮತಚೋರಿ ನಡೆದಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಫೋಟಕ ಆರೋಪ ಮಾಡಿದ್ದಾರೆ..
ನವದೆಹಲಿಯಲ್ಲಿ ಶಾಸಕ ಬಿ. ಆರ್ ಪಾಟೀಲ್ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೆಲ ದಾಖಲೆಗಳನ್ನ ನೀಡುತ್ತೇನೆ. ಆಳಂದ ಕರ್ನಾಟಕದ ಒಂದು ಕ್ಷೇತ್ರವಾಗಿದೆ. ಆಳಂದ ಕ್ಷೇತ್ರದಲ್ಲಿ 6018 ಮತದಾರರ ಹೆಸರು ಅಳಿಸಲಾಗಿದೆ. 2023 ರ ಚುನಾವಣೆಯಲ್ಲಿ ಆಳಂದದಲ್ಲಿ 6,018 ಕ್ಕಿಂತ ಹೆಚ್ಚು ಮತಗಳನ್ನು ಅಳಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಯೊಬ್ಬರು ತಮ್ಮ ಸ್ವಂತ ಚಿಕ್ಕಪ್ಪನ ಮತವನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕಂಡುಕೊಂಡಾಗ ಈ ವಂಚನೆ ಆಕಸ್ಮಿಕವಾಗಿ ಬಹಿರಂಗವಾಯಿತು ಎಂದರು.
ಅವರು ತಮ್ಮ ಚಿಕ್ಕಪ್ಪನ ಮತವನ್ನು ಯಾರು ಅಳಿಸಿದ್ದಾರೆಂದು ಪರಿಶೀಲಿಸಿದರು, ಮತವನ್ನು ಅಳಿಸಿದ್ದು ನೆರೆಹೊರೆಯವರು ಎಂದು ಕಂಡುಕೊಂಡು ತಮ್ಮ ನೆರೆಹೊರೆಯವರನ್ನು ಕೇಳಿದರು, ಆದರೆ ಅವರು ನಾನು ಯಾವುದೇ ಮತವನ್ನು ಅಳಿಸಿಲ್ಲ ಎಂದು ಹೇಳಿದರು. ಮತವನ್ನು ಅಳಿಸಿದ ವ್ಯಕ್ತಿಯಾಗಲಿ ಅಥವಾ ಯಾರ ಮತವನ್ನು ಅಳಿಸಲಾಗಿದೆಯೋ ಆ ವ್ಯಕ್ತಿಯಾಗಲಿ ತಿಳಿದಿಲ್ಲ. ಬೇರೆ ಯಾವುದೋ ಶಕ್ತಿ ಪ್ರಕ್ರಿಯೆಯನ್ನು ಹೈಜಾಕ್ ಮಾಡಿ ಮತವನ್ನು ಅಳಿಸಿದೆ” ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪಗಳು ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರಿಗೆ ಈ ಬಗ್ಗೆ ಗೊತ್ತಿಲ್ಲವೇ ಎಂದು ರಾಹುಲ್ ಪ್ರಶ್ನಿಸಿದರು. ನಾವು 16 ಬಾರಿ ಪತ್ರ ಬರೆದರೂ ಯಾವುದೇ ಉತ್ತರ ಬಂದಿಲ್ಲ. ಬದಲಿಗೆ ನಕಲಿ ಮತದಾರರನ್ನು ಮತ್ತು ಮತಗಳ್ಳರನ್ನು ರಕ್ಷಿಸುವ ಕೆಲಸವನ್ನು ಆಯೋಗ ಮಾಡಿದೆ ಎಂದು ಅವರು ಆರೋಪಿಸಿದರು. ಈ ಹಗರಣವು ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದು ರಾಹುಲ್ ಗಾಂಧಿ ಹೇಳಿದರು.




