ಕೋಲಾರ : ವಿಪಕ್ಷ ನಾಯಕ ಆರ್. ಅಶೋಕ್ ಇಂದು ಮಕ್ಕಳಿಂದ ಶೌಚಗುಂಡಿ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದ ಕೋಲಾರ ಜಿಲ್ಲೆಯ ಯಲುವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಅಧಿಕಾರಿಗಳು, ಶಿಕ್ಷಕರು, ಮಕ್ಕಳೊಂದಿಗೆ ಘಟನೆ ಕುರಿತು ಮಾಹಿತಿ ಪಡೆದರು.
ಮಕ್ಕಳ ಈ ರೀತಿ ಕೆಲಸ ಮಾಡಿಸಿರೋದು ಅಪರಾಧ, ಹಿಂದೆ ಈ ಕೆಲಸದಿಂದ ಸುಮಾರು ಜನ ಸಾವೀಗೀಡಾದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಮುಚ್ಚಿಹಾಕೋ ಪ್ರಯತ್ನ ಮಾಡಿದ್ದಾರೆಂದು ಆರ್ ಅಶೋಕ್ ಹೇಳಿದರು.
ಈ ಕೆಲಸವನ್ನ ನಾಗರೀಕ ಸಮಾಜ ಒಪ್ಪಬೇಕಾ, ಬೆಳಗಾವಿಯಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿರೋದು ಇಂತಹ ಘಟನೆಗಳು ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಹದ್ದು. ಇದೊಂದು ನಾಚಿಗೇಡಿನ ಸರ್ಕಾರ, ಇದರ ಸೀರಿಯಸ್ನೆಸ್ ಸರ್ಕಾರಕ್ಕಿಲ್ಲ. ಮಕ್ಕಳಿಂದ ಇಂತಹ ಕಾರ್ಯ ಮಾಡಿಸಿದವರಿಗೆ ತಕ್ಕ ಶಿಕ್ಷೆ ಆಗಬೇಕು, ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದು ಅವರು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಶ್ರೀಮತಿ ಭಾರತಿ ಶೆಟ್ಟಿ, ಶ್ರೀಮತಿ ತೇಜಸ್ವಿನಿ ಗೌಡ, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಗೀತಾ ವಿವೇಕಾನಂದ ಹಾಗೂ ಮುಖಂಡರು ಜೊತೆಯಲ್ಲಿದ್ದರು.