ಬೆಂಗಳೂರು : 2015ರ ಗಣರಾಜ್ಯೋತ್ಸವ ಸಮಾರಂಭದ ಅತಿಥಿಯಾಗಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಮೂವರು ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರರನ್ನು ದೋಷಿ ಎಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಉಗ್ರರು ಪಾಕಿಸ್ತಾನದಿಂದ ಬಂದ ಸೂಚನೆಯಂತೆ ಸ್ಫೋಟಕ್ಕೆ ಸಂಚು ಹೂಡಿದ್ದರು.
ಭಟ್ಕಳದ ನಿವಾಸಿಗಳಾದ ಡಾ. ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸುಬೈರ್ ಮತ್ತು ಸದ್ದಾಂ ಹುಸೇನ್ ಐಪಿಸಿಯ ವಿವಿಧ ಸೆಕ್ಷನ್ಗಳು, ಕಾನೂನುಬಾಹಿರ ಚಟುವಟಿಕೆಗಳು ತಡೆ ಕಾಯ್ದೆ (ಯುಎಪಿಎ) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ದೋಷಿಗಳು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಉಗ್ರರ ಪೈಕಿ ಅಫಾಕ್ ಪಾಕಿಸ್ತಾನದ ಕರಾಚಿಯ ಅರ್ಸಾಲಾ ಅಬೀರ್ ಅನ್ನು ವಿವಾಹವಾಗಿದ್ದ.
ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು…..
ಸ್ಫೋಟ ಸಂಚಿನ ಕುರಿತು 2015 ರಲ್ಲಿ ಬೆಂಗಳೂರಿನ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕೇಂದ್ರ ಅಪರಾಧ ವಿಭಾಗದ ಎಸಿಪಿ ತಮ್ಮಯ್ಯ ಎಂಕೆ, ಆಗಿನ ಜಂಟಿ ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎಸ್ಪಿಪಿ ಶಂಕರ ಬಿಕ್ಕಣ್ಣನವರ್ ಪ್ರಾಸಿಕ್ಯೂಷನ್ ನೇತೃತ್ವ ವಹಿಸಿದ್ದರು.
ಅಪರಾಧಿಗಳಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟ
ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಎನ್ಐಎ ವಿಶೇಷ ನ್ಯಾಯಾಲಯ ಇಂದು ಪ್ರಕಟಿಸಲಿದೆ. ಪ್ರಕರಣದಲ್ಲಿ ಭಟ್ಕಳದ ರಿಯಾಜ್ ಅಹಮದ್ ಸಯೀದಿ ಮತ್ತು ಜೈನುಲ್ಲಾಬುದ್ದೀನ್ ಅವರನ್ನು ಖುಲಾಸೆಗೊಳಿಸಲಾಗಿದೆ. ಇತರ ಆರೋಪಿಗಳಾದ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಅಲಿಫ್ ಮತ್ತು ಸಮೀರ್ ತಲೆಮರೆಸಿಕೊಂಡಿದ್ದಾರೆ.