ಕ್ರೈಂ ಸ್ಟೋರಿರಾಜ್ಯಸುದ್ದಿಹಣಕಾಸು

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ‘ಪಲ್ಸರ್ ಬಾಬು’: 42 ಲಕ್ಷದ ಮಾಲು ಜಪ್ತಿ..!

ಬೆಂಗಳೂರು: ಮದುವೆ ಸಮಾರಂಭಗಳ ಸಡಗರದ ನಡುವೆ ನಯವಾಗಿಯೇ ನುಗ್ಗಿ ಕನ್ನ ಹಾಕುತ್ತಿದ್ದ ಚನ್ನಪಟ್ಟಣ ಮೂಲದ ಕುಖ್ಯಾತ ಕಳ್ಳ `ಪಲ್ಸರ್ ಬಾಬು’ ಅಲಿಯಾಸ್ ಬಾಬುನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಮದುವೆಯೊಂದರಲ್ಲಿ ಕೈಚಳಕ ತೋರಿಸಲು ಹೋಗಿ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಈ ಹಿಂದೆ 19ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಜೈಲು ಸೇರಿದ್ದ ಈತನಿಗೆ ಕೊರೊನಾ ಸಮಯ ವರದಾನವಾಗಿತ್ತು. ಸಾಂಕ್ರಾಮಿಕದ ವೇಳೆ ಜೈಲಿನಿಂದ ಬಿಡುಗಡೆಯಾದ 2,000 ಕೈದಿಗಳ ಪೈಕಿ ಈತನೂ ಒಬ್ಬ. ಆದರೆ ಹೊರಬಂದ ಮೇಲೆ ಸುಧಾರಿಸುವ ಬದಲು ತನ್ನ ಹಳೇ ಚಾಳಿಯನ್ನೇ ಮುಂದುವರಿಸಿದ್ದ. ಮದುವೆ ಮನೆಯಲ್ಲಿ ಆಟವಾಡುವ ಸಣ್ಣ ಮಕ್ಕಳ ಬಳಿ ಇರುವ ಚಿನ್ನದ ಸರ, ಉಂಗುರ ಹಾಗೂ ಮೊಬೈಲ್‌ಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ.

ಫೋಟೋಗ್ರಾಫರ್‌ಗಳ ಬೆಲೆಬಾಳುವ ಹೈ-ಎಂಡ್ ಕ್ಯಾಮರಾ, ಲೆನ್ಸ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದ. ಪಾರ್ಕಿಂಗ್‌ನಲ್ಲಿರುವ ಬೈಕ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ.

ಆರೋಪಿ ಬಾಬು ಕದ್ದ ಚಿನ್ನವನ್ನು ಮಾರುವ ಬದಲು, ಅದನ್ನು ಕರಗಿಸಿ ತನಗೆ ಇಷ್ಟವಾದ ‘ತಿರುಪತಿ ಲಾಕೆಟ್’ ಮತ್ತು ಉಂಗುರಗಳನ್ನು ಮಾಡಿಸಿಕೊಂಡು ಶೋಕಿ ಮಾಡುತ್ತಿದ್ದ. ಕದ್ದ ಹಣದಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿ ಮೋಜು-ಮಸ್ತಿ ಮಾಡುತ್ತಿದ್ದ ಈತನ ಐಷಾರಾಮಿ ಜೀವನ ಕಂಡು ಪೊಲೀಸರೇ ದಂಗಾಗಿದ್ದಾರೆ.

Comments (0)

Your email address will not be published. Required fields are marked *

Back to top button