ರಾಜ್ಯಸುದ್ದಿ

ಪಿಎಸ್‌ಐ ಹಗರಣದ ಮಾಸ್ಟರ್ ಮೈಂಡ್‌ ಆರ್.ಡಿ.ಪಾಟೀಲ್ ಕಲಬುರಗಿ ಜೈಲಿನಿಂದ ಮೈಸೂರಿಗೆ ಶಿಫ್ಟ್

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಹಾಗೂ ಮಾಸ್ಟರ್ ಮೈಂಡ್ ಆರ್.ಡಿ.ಪಾಟೀಲ್ ಅವರನ್ನು ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಜೈಲಿನ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿ ಅಶಿಸ್ತು ಸೃಷ್ಟಿಸುತ್ತಿದ್ದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಕಳೆದ ತಿಂಗಳು ಕೈದಿಗಳು ಜೂಜಾಟವಾಡುತ್ತಿರುವುದು ಹಾಗೂ ಮದ್ಯ ಸೇವಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಗಮನ ಸೆಳೆದಿದ್ದವು. ಈ ಪ್ರಕರಣದ ತನಿಖೆಯಲ್ಲಿ ಆರ್.ಡಿ.ಪಾಟೀಲ್‌ನ ಪಾತ್ರ ಇರುವುದಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು.ತನ್ನ ಪ್ರಭಾವ ಬಳಸಿ ಇತರೆ ಕೈದಿಗಳನ್ನು ಗುಂಪುಗಾರಿಕೆ ನಡೆಸಲು ಪ್ರೇರೇಪಿಸುತ್ತಿದ್ದಾನೆ ಜೈಲಿನ ಶಿಸ್ತು ಹಾಗೂ ಭದ್ರತೆಗೆ ಧಕ್ಕೆಯಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ ಜೈಲಿನ ಮುಖ್ಯ ಅಧೀಕ್ಷಕಿಯ ವಿರುದ್ಧವೇ ಆರ್.ಡಿ.ಪಾಟೀಲ್ ಲಂಚದ ಆರೋಪ ಹೊರಿಸಿದ್ದ. ಬಳಿಕ ಪೆನ್‌ಡ್ರೈವ್ ಮೂಲಕ ಅಕ್ರಮಗಳ ವಿಡಿಯೋಗಳನ್ನು ಹರಿಬಿಡುವ ಮೂಲಕ ಕಾರಾಗೃಹ ಇಲಾಖೆಗೆ ಮುಜುಗರ ಉಂಟುಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿತ್ತು, ಈ ಹಿನ್ನೆಲೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಸ್ವತಃ ಕಲಬುರಗಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಜೈಲಿನ ಸ್ಥಿತಿಗತಿಗಳ ಕುರಿತು ಸವಿಸ್ತಾರ ತನಿಖೆಗೆ ಸೂಚನೆ ನೀಡಲಾಗಿತ್ತು. ಇತರೆ ಸಹಚರರಿಂದ ದೂರವಿಡಲು ಹಾಗೂ ತನಿಖೆಗೆ ಸಹಕರಿಸುವಂತೆ ಮಾಡಲು ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಇಲಾಖೆ ತೀರ್ಮಾನಿಸಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮೈಸೂರಿಗೆ ಕರೆದೊಯ್ಯಲಾಗಿದೆ.

Comments (0)

Your email address will not be published. Required fields are marked *

Back to top button