ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ 5, 6 ಮತ್ತು 7ನೇ ವಾರ್ಡಿಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ಅಸಮರ್ಪಕ ನೀರು ಪೂರೈಕೆಯ ವಿರುದ್ದ ನಾಗರಿಕರು ಬೀದಿಗಿಳಿದು ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ತೆಕ್ಕಲಕೋಟೆಯ ಪಿಂಜಾರ್ ಓಣಿಯ ನಿವಾಸಿಗಳು ಖಾಲಿ ಕೊಡಗಳೊಂದಿಗೆ ರಸ್ತೆಗೆ ಇಳಿದಿದ್ದಲ್ಲದೆ, ಕುಡಿಯುವ ನೀರಿಗಾಗಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರೂದ್ದ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಕಳೆದ 15 ದಿನಗಳಿಂದ ನೀರಿನ ಪೂರೈಕೆ ಇಲ್ಲ. ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಯಾವ ಕಾರಣಕ್ಕೆ ನೀರು ಪೂರೈಕೆ ಮಾಡುತ್ತಿಲ್ಲ ಎಂದರು. ಪ್ರತಿ ಸಲ ಒಂದಲ್ಲಾ ಒಂದು ಕಾರಣ ಹೇಳಿ ದಿನ ದೂಡುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗಿದೆ ಎಂದು ನಾಗರಿಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಸರಿಯಾಗಿ ಏಕೆ ನೀರು ಬಿಡುತ್ತಿಲ್ಲ ಎಂದು ಕಾರಣ ಕೇಳಿದರೆ ವಿದ್ಯುತ್ ಸಮಸ್ಯೆ, ಪಂಪ್ ಹಾಳಾಗಿದೆ ಎಂಬ ಕುಂಟು ನೆಪ ಹೇಳುತ್ತೀರಿ. ಎಲ್ಲರಿಗೂ ಮನವಿ ಕೊಟ್ಟು, ಸಮಸ್ಯೆಯ ಬಗ್ಗೆ ಹೇಳಿ ಸಾಕಾಗಿ ಹೋಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥರಾದ ಜಲಾಲುದ್ದೀನ್, ಹುಸೇನ್ ಸಾಬ್, ಅಸ್ಲಾಂ, ಹಬೀಬ್ ಬಾಷಾ, ಮೆಹಬೂಬ್ ಬಾಷಾ, ಸುಭಾನ್, ಮಹಭಾಷ, ಕಲಂದರ್, ರಾಜ, ರಫೀಕ್ ಇನ್ನಿತರರು ಇದ್ದರು.