ನವದೆಹಲಿ: ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ಲೋಕಸಭಾ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಪ್ರಿಯಾಂಕಾ ಗಾಂಧಿ ಅವರು ಈಗ ಸಂಸತ್ ಪ್ರವೇಶಿಸಿದ ಗಾಂಧಿ ಕುಟುಂಬದ ಮೂರನೇ ಸದಸ್ಯರಾಗಿದ್ದಾರೆ. ಅವರ ತಾಯಿ ಸೋನಿಯಾ ಗಾಂಧಿ ರಾಜಸ್ಥಾನದಿಂದ ಪಕ್ಷದ ರಾಜ್ಯಸಭಾ ಸಂಸದರಾಗಿದ್ದಾರೆ.
ನ.23 ರಂದು ನಡೆದ ಮತ ಎಣಿಕೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್‌ನಿಂದ ಭಾರಿ ಅಂತರದ ಗೆಲುವು ದಾಖಲಿಸಿದರು. ಅವರು 6.22 ಲಕ್ಷ ಮತಗಳನ್ನು ಪಡೆದರು. ಎರಡನೇ ಸ್ಥಾನದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸತ್ಯನ್ ಮೊಕೇರಿಗಿಂತ ನಾಲ್ಕು ಲಕ್ಷಕ್ಕಿಂತ ಹೆಚ್ಚು ಮತ್ತು ಬಿಜೆಪಿಯ ನವ್ಯಾ ಹರಿದಾಸ್‌ಗಿಂತ 5.12 ಲಕ್ಷ ಹೆಚ್ಚು ಮತಗಳ ಅಂತರದಿಂದ ಗೆದ್ದು ದಾಖಲೆ ಬರೆದಿದ್ದಾರೆ.
ಪ್ರಮಾಣವಚನ ಸ್ವೀಕಾರದ ವೇಳೆ ಪ್ರಿಯಾಂಕಾ ಅವರು ಕೇರಳದ ಬ್ರೋಕೆಡ್ ಸೀರೆಯನ್ನು ಧರಿಸಿದ್ದರು. ತನ್ನ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಪತಿ ರಾಬರ್ಟ್ ವಾದ್ರಾ ಅವರೊಂದಿಗೆ ಸಂಸತ್ ಭವನಕ್ಕೆ ಆಗಮಿಸಿದ್ದರು. ಅಲ್ಲದೆ, ಪ್ರಿಯಾಂಕಾ ಅವರ ಮಕ್ಕಳಿಬ್ಬರೂ ಸಂಸತ್ಗೆ ಆಗಮಿಸಿದ್ದರು.
ಇತ್ತೀಚೆಗೆ ಪ್ರಕಟಗೊಂಡ ವಯನಾಡ್ ಲೋಕಸಭಾ ಉಪ ಚುನಾವಣೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಮತಗಳ ದಾಖಲೆ ಅಂತರದಿಂದ ಗೆಲುವು ಸಾಧಿಸಿರುವ ಪ್ರಿಯಾಂಕಾ ಗಾಂಧಿ, ಆ ಮೂಲಕ ಪ್ರಪ್ರಥಮ ಬಾರಿಗೆ ಚುನಾಯಿತ ಪ್ರತಿನಿಧಿಯಾಗಿದ್ದಾರೆ.
ಇಲ್ಲಿಯವರೆಗೆ ಪಕ್ಷ ಸಂಘಟನೆಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿಗೆ ನೆರವು ನೀಡುತ್ತಾ ಬಂದಿದ್ದ ಪ್ರಿಯಾಂಕಾ ಗಾಂಧಿ, ಇದೀಗ ಲೋಕಸಭೆಯಲ್ಲೂ ತಮ್ಮ ಸಹೋದರನಿಗೆ ಸಾಥ್ ನೀಡಲಿದ್ದಾರೆ.