ಕರ್ನಾಟಕದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ರಾಜಾತಿಥ್ಯ ಕರ್ಮಕಾಂಡಕ್ಕೆ ಬ್ರೇಕ್ ಇಲ್ಲ. ಒಂದ್ಕಡೆ ವಿಕೃತಕಾಮಿ ಉಮೇಶ್ ರೆಡ್ಡಿ ಅನ್ನೋ ಖೈದಿಗೆ ಸೆಲ್‌ನಲ್ಲೇ ಮೊಬೈಲ್ ಫೋನು, ಟಿವಿ ಕೊಟ್ಟು ಅರಮನೆ ವಾಸ ಕೊಟ್ಟಿದ್ದಾರೆ.
ಆದ್ರೆ, ಇದೇ ಜೈಲಲ್ಲಿ ಇರೋ ನಟ ದರ್ಶನ್ ಮಾತ್ರ ಒಂದು ದಿಂಬು, ಹಾಸಿಗೆಗೂ ಪರದಾಡುತ್ತಿದ್ದಾರಂತೆ. ಇತರ ಕೈದಿಗಳಾದ ಉಮೇಶ್ ರೆಡ್ಡಿ ಮತ್ತು ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಮೊಬೈಲ್ ಫೋನ್‌ಗಳನ್ನು ಆರಾಮವಾಗಿ ಬಳಸುತ್ತಿರುವುದು ಕಂಡುಬಂದಿದೆ.
ಸೀರಿಯಲ್ ರೇಪಿಸ್ಟ್, ಕೊಲೆಗಡುಕ ಅಂತ ಕುಖ್ಯಾತಿ ಪಡೆದಿರೋ ಉಮೇಶ್ ರೆಡ್ಡಿಗೆ ಜೈಲು ಅಕ್ಷರಶಃ ಸ್ವರ್ಗ ಆಗಿದೆ. ಅವನ ಕೈಯಲ್ಲಿ ಒಂದು, ಎರಡಲ್ಲ… ಬರೋಬ್ಬರಿ ಎರಡು ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಇವೆಯಂತೆ. ಆರಾಮವಾಗಿ ಸೆಲ್‌ನಲ್ಲಿ ಕೂತು ಮೊಬೈಲ್‌ನಲ್ಲಿ ಮಾತಾಡೋ ವೀಡಿಯೊಗಳೇ ಈಗ ವೈರಲ್ ಆಗಿವೆ. ಅಷ್ಟೇ ಅಲ್ಲ, ಮನರಂಜನೆಗೆ ಅಂತಾ ಅವನ ಕೊಠಡಿಯಲ್ಲಿ ಟಿವಿ ಸೌಲಭ್ಯನೂ ಇದೆಯಂತೆ.
ಇಷ್ಟಕ್ಕೇ ನಿಂತಿಲ್ಲ ಈ ರಾಜಾತಿಥ್ಯ, ತನಗೆ ಬೇಕಾದ ಅಡುಗೆಯನ್ನು ತಾನೇ ಮಾಡ್ಕೊಂಡು ತಿನ್ನುವಷ್ಟು ಸ್ವಾತಂತ್ರ್ಯ ಆತನಿಗೆ ಸಿಕ್ಕಿದೆ. ಇದನ್ನ ನೋಡಿದ್ರೆ, ಇದು ಶಿಕ್ಷೆನಾ ಅಥವಾ ಸುಖವಾಸನಾ ಅನ್ನೋ ಪ್ರಶ್ನೆ ಮೂಡುತ್ತೆ. ಈ ಉಮೇಶ್ ರೆಡ್ಡಿಗೆ ಜೈಲಿನ ಹಿರಿಯ ಅಧಿಕಾರಿಗಳೇ ಈ ರಾಜಾತಿಥ್ಯದ ವ್ಯವಸ್ಥೆ ಮಾಡಿದ್ದಾರೆ ಅನ್ನೋ ಆರೋಪ ಬಲವಾಗಿ ಕೇಳಿಬಂದಿದೆ.
ಕಾನೂನಿನ ಕಣ್ಣಿಗೆ ಮಣ್ಣೆರಚಿ, ದುಡ್ಡಿನ ಆಸೆಗೆ ಈ ರೀತಿ ಮಾಡ್ತಿದ್ದಾರಾ? ಒಬ್ಬ ವಿಕೃತ ಅಪರಾಧಿಗೆ ಇಷ್ಟೊಂದು ‘ಕೇರ್’ ಕೊಡುವ ಅಧಿಕಾರಿಗಳು, ನಿಜವಾಗಿಯೂ ಜೈಲಿನ ಸುಧಾರಣೆ ಮಾಡ್ತಿದ್ದಾರಾ ಅಥವಾ ಭ್ರಷ್ಟಾಚಾರದ ಕೂಪ ಆಗಿಸಿದ್ದಾರಾ ಎಂದು ಜೈಲು ಅಧಿಕಾರಿಗಳ ಧೋರಣೆ ಮತ್ತು ವ್ಯವಸ್ಥೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಇನ್ನು ಉಮೇಶ್ ರೆಡ್ಡಿ ಬಿಂದಾಸ್ ಲೈಫ್ ಲೀಡ್ ಮಾಡ್ತಿದ್ರೆ, ಇನ್ನೊಂದ್ಕಡೆ ಇತ್ತೀಚೆಗೆ ಕೊಲೆ ಆರೋಪದಲ್ಲಿ ಬಂಧನವಾಗಿರೋ ನಟ ದರ್ಶನ್‌ಗೆ ಮಾತ್ರ ಕನಿಷ್ಠ ಸೌಲಭ್ಯಗಳೂ ಸಿಕ್ತಿಲ್ಲವಂತೆ.
ಒಂದು ದಿಂಬು, ಮಲಗಲು ಒಂದು ಹಾಸಿಗೆ ಸಿಗದೆ ದರ್ಶನ್ ಪರದಾಡುತ್ತಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿದೆ. ದೊಡ್ಡ ಸೆಲೆಬ್ರಿಟಿ ಆಗಿದ್ದರೂ, ದರ್ಶನ್‌ಗೆ ಈ ಸ್ಥಿತಿ. ಆದರೆ, ಕುಖ್ಯಾತ ಅಪರಾಧಿ ಉಮೇಶ್ ರೆಡ್ಡಿಗೆ ಮಾತ್ರ ರಾಜನಂತೆ ನೋಡಿಕೊಳ್ಳಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನ ಈ ಕಥೆ ಕೇಳಿದರೆ, ಇಲ್ಲಿ ಕಾನೂನು ಅಂದ್ರೆ ಏನು ಅನ್ನೋ ಅನುಮಾನ ಬರುತ್ತಿದೆ..


