ಕಲಬುರಗಿ: ಜಿಎಸ್ಟಿ ಇಳಿಕೆಯಿಂದ ಬಡವರಿಗೆ ಅನುಕೂಲವಾಗಲಿದ್ದು, ಇದನ್ನು ನಾನು ಟೀಕಿಸಲ್ಲ. ಆದರೆ ಜಿಎಸ್ಟಿ ಇಳಿಸುವಂತೆ ನಾವು ಎಂಟು ವರ್ಷಗಳ ಹಿಂದೆಯೇ ಹೇಳಿದ್ದೇವೆ. ಆಗ ಅವರು ಪರಿಷ್ಕರಿಸಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ದಿಢೀರ್ ಯಾವ ಕಾರಣಕ್ಕೆ ಪರಿಷ್ಕರಿಸುತ್ತಿದ್ದಾರೋ ಮೋದಿ ಅವರಿಗೆ ಗೊತ್ತು. ನಾವು ಎಂದಿಗೂ ಜನಪರವಾದ ಸಮಸ್ಯೆಗಳನ್ನು ಎತ್ತಿಹಿಡಿದು ಸರ್ಕಾರಕ್ಕೆ ಹೇಳುತ್ತೇವೆ. ಆದರೆ ಅವರು ಯಾವಾಗಲೂ ನಿರ್ಲಕ್ಷಿಸುತ್ತಾರೆ ಎಂದು ಕಿಡಿಕಾರಿದ್ರು.
ಪ್ರಧಾನಿ ಮೋದಿಯವರಿಗೆ ನಾನು ಏನು ಮಾಡಿದ್ರೂ ನಡೆಯುತ್ತದೆ ಎಂಬ ಅಹಂಕಾರವಿದೆ. ಅವರ ಅಹಂಕಾರವೇ ಅವರಿಗೆ ಮುಳುವಾಗಲಿದೆ. ವಿದೇಶಾಂಗ ನೀತಿಯಲ್ಲಿ ಭಾರತ ದಶಕಗಳಿಂದ ಅನುಸರಿಸಿದ್ದ ಅಲಿಪ್ತ ನೀತಿ ನಿರ್ಲಕ್ಷಿಸಿದರು. ಮೋದಿ ವಿದೇಶದಲ್ಲಿ ಹೋಗಿ ರಾಜಕೀಯ ನಾಯಕರ ಪರ ಪ್ರಚಾರ ಮಾಡಬಾರದು. ಆದರೆ ಟ್ರಂಪ್ ಪರ ಪ್ರಚಾರ ಮಾಡಿದರು.
ಮಾತ್ತೆತಿದ್ರೆ ಟ್ರಂಪ್ ಟ್ರಂಪ್ ಎಂತಾರೆ.. ಟ್ರಂಪ್ ಬೆಳಗಾದರೆ ಫೋನ್ ಮಾಡ್ತಾರೆ ಅಂತಾ ಹೇಳ್ತಾರೆ. ಚೀನಾವನ್ನು ಇಷ್ಟು ದಿನ ಹಿಯಾಳಿಸಿದ್ರು. ಇದೀಗ ಅದೇ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಹೋಗಿ ಬಂದಿದ್ದಾರೆ. ದೇಶಕ್ಕೆ ಸಮಸ್ಯೆ ಬಂದಾಗ ನಾವೆಲ್ಲ ಒಂದಾಗಿದ್ದೇವೆ ಅನ್ನುವ ಸಂದೇಶ ಕೊಟ್ಟಿದ್ದೇವೆ.ಪೆಹಲ್ಗಾಮ್ ದಾಳಿ ಆದಾಗಲೂ ಸಹ ನಾವು ಕೇಂದ್ರಕ್ಕೆ ಬೆಂಬಲ ನೀಡಿದ್ದೇವೆ. ಆದರೆ ಬಿಜೆಪಿಗರು ಪ್ರತಿ ಬಾರಿ ಮೋದಿ ಹೈ ಮೋದಿ ಹೈ ಅಂತಾರೆ.
ರಾಜ್ಯದಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಳೆದ 15 ವರ್ಷಗಳಿಂದ ಈಚೆಗೆ ಬಳಸುತ್ತಿರುವ ಇವಿಎಂಗಳನ್ನೇ ನೀವೆಲ್ಲ ನಂಬುವುದಾರರೆ, 50 ವರ್ಷಗಳ ಕಾಲ ಬಳಸಿದ್ದ ಮತಪತ್ರಗಳನ್ನು ಯಾಕೆ ನಂಬಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಇವಿಎಂನಲ್ಲಿ ಮಹಾಮೋಸ ಆಗಿದೆ.ನಾನು ಸಹ ಚುನಾವಣೆಯಲ್ಲಿ ಸೋತಾಗ ಮತಗಳ್ಳತನವಾಗಿತ್ತು. ನನ್ನ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ಸಿಕ್ಕು ಗೆಲ್ಲುತ್ತೇನೆಂಬ ವಿಶ್ವಾಸವಿತ್ತು. ಆದರೆ ನನ್ನ ನಿರೀಕ್ಷೆ ಹುಸಿಯಾಯಿತು.
ಕಲಬುರಗಿ ಲೋಕಸಭಾದಲ್ಲಿ ಐದಾರು ಕ್ಷೇತ್ರಗಳಲ್ಲಿ ನನಗೆ ಬಹಳ ಕಡಿಮೆ ಮತ ಬಂದಿವೆ. ನಮ್ಮ ಕಣ್ಣೆದೆರೆ ಮೋಸ ಆಗಿದೆ. ಪಾರ್ಲಿಮೆಂಟ್‌ನಲ್ಲಿ ಖರ್ಗೆ ಬಹುತ್ ಬಾರ್ ಜಿತ್ರೆ ಅಂತಾ ಪ್ರಧಾನಿ ಮೋದಿ ಹೇಳಿದ್ರು. ಪಾರ್ಲಿಮೆಂಟ್‌ನಲ್ಲೆ ಮೋದಿ ಈ ರೀತಿ ಹೇಳಿದಮೇಲೆ ನನಗೆ ಬಲವಾದ ಅನುಮಾನ ಬಂದಿದೆ ಬಿಹಾರ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆ ಸಹ ಓಟ್ ಚೋರಿ ಆಗಿದೆ ಎಂದು ಕಿಡಿಕಾರಿದ್ರು.