ʼಹೊಗೆ ಬಾಂಬ್ʼ ಸುಳಿಯಲ್ಲಿ ಪ್ರತಾಪ್ ಸಿಂಹ..!
ಮೈಸೂರು ಕ್ಷೇತ್ರ ಗೆಲ್ಲಲು ಕಾಂಗ್ರೆಸ್-ಜೆಡಿಎಸ್ ರಣತಂತ್ರ..!
ಮೈಸೂರು ; ಮೈಸೂರು ಸಂಸದ ಪ್ರತಾಪ್ ಸಿಂಹಗೆ ಹೊಗೆ ಬಾಂಬ್ ಶಾಕ್ ಎದುರಾಗಿದೆ. ಸಿಂಹ ಅವರ ಪಾಸ್ ಪಡೆದು ಸಂಸತ್‌ಗೆ ನುಗ್ಗಿದ್ದ ಕಿಡಿಗೇಡಿಗಳು ಸ್ಮೋಕ್ ಬಾಂಬ್ ಸಿಡಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರು. ಈ ಪ್ರಕರಣದಲ್ಲಿ ನಿನ್ನೆ ವಿಚಾರಣೆ ಎದುರಿಸಿ ಮುಜುಗರಕ್ಕೆ ಈಡಾಗಿರುವ ಸಿಂಹ ವಿರುದ್ಧ ಕ್ಷೇತ್ರದಲ್ಲಿ ವೈರಿಗಳು ಒಟ್ಟಾಗಿದ್ದಾರೆ. ಸಿಂಹಗೆ ಟಿಕೆಟ್ ತಪ್ಪಿಸುವ ಕೆಲಸ ಶುರುವಾಗಿರುವುದು ಸಿಂಹ ಸಂಕಷ್ಟಕ್ಕೆ ತುಪ್ಪ ಸುರಿದಂತಾಗಿದೆ.
ಮೈಸೂರು ಜಿಲ್ಲೆಯಲ್ಲಿ ಪ್ರತಾಪ್ ಸಿಂಹ ವಿರುದ್ದ ಬಿಜೆಪಿಯಲ್ಲೇ ಬಾರೀ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಶಾಸಕರು ಮತ್ತು ಮಾಜಿ ಶಾಸಕರೇ ಪ್ರತಾಪ್ ಸಿಂಹ ವಿರುದ್ದ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಎಲ್ಲಾ ಅನೇಕ ಕಾಮಗಾರಿಗಳನ್ನ ಮೈಸೂರಿಗರಿಗೆ ಕೊಡದೇ ಹೊರ ಜಿಲ್ಲೆ ಮತ್ತು ಹೊರರಾಜ್ಯದವರಿಗೆ ನೀಡುತ್ತಿದ್ದಾರೆಂದು ವಿರೋಧಿಗಳು ಹುಯಿಲೆಬ್ಬಿಸಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಜೆಡಿಎಸ್ ಕ್ಷೇತ್ರ ಬಿಟ್ಟುಕೊಡುವಂತೆ ಪಟ್ಟು ಹಾಕ್ತಿದೆ. ಮಾಜಿ ಶಾಸಕ ಸಾರಾ ಮಹೇಶ್ ಜೆಡಿಎಸ್ ಆಕಾಂಕ್ಷಿಯಾಗಿದ್ದಾರೆ. ಮತ್ತೊಂದೆಡೆ ಬಿಜೆಪಿ ಶಾಸಕ ಜಿಟಿ,ದೇವೇಗೌಡ ಕೂಡಾ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಲು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೀಗೆ ಮೊದಲ ಎಲೆಕ್ಷನ್ ನಲ್ಲಿ ಸಿಂಹ ಮೇಲೆ ಕರುಣೆ ತೋರಿಸಿದ್ದ ದಳಪತಿಗಳು ಈ ಬಾರಿ ಕೈಕೊಡುವ ಸಾಧ್ಯತೆಗಳಿವೆ. ಮತ್ತೊಂದು ಕಡೆ ಹೇಗಾದರೂ ಮಾಡಿ ತವರು ಕ್ಷೇತ್ರ ಗೆಲ್ಲಲು ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ತಮ್ಮ ಮಗನನ್ನೇ ಇಳಿಸಲು ತಯಾರಾಗಿದ್ದಾರೆ. ಇದೂ ಕೂಡಾ ಸಿಂಹ ನಿದ್ದೆಗೆಡಿಸಿದೆ.
ಮೋದಿ ನಾಮಬಲದಿಂದ ಸಿಂಹ ಎರಡು ಬಾರಿ ಗೆದ್ದಿದ್ದರು. ಆದರೆ, ಈ ಬಾರಿ ಸಂಸತ್ ಹೊಗೆ ಬಾಂಬ್ ಪ್ರಕರಣ ಯಾವುದೇ ತಿರುವು ಪಡೆಯುವ ಸಾಧ್ಯತೆಗಳಿವೆ. ಈ ಹಿಂದೆ ಹಾಲಿ ಶಾಸಕ ಎಸ್,ಎ,ರಾಮದಾಸ್ ಗೆ ಬಿಜೆಪಿ ಟಿಕೆಟ್ ತಪ್ಪಿಸಿ ಶ್ರೀವತ್ಸರಿಗೆ ಟಿಕೆಟ್ ನೀಡಿತ್ತು. ಈ ಬಾರಿ ಪ್ರತಾಪ್ ಸಿಂಹ ಕೂಡಾ ಇದೇ ಮಾದರಿಗೆ ಬಲಿಯಾಗುವ ಸುದ್ದಿ ಕ್ಷೇತ್ರದಲ್ಲಿ ದಟ್ಟವಾಗಿದೆ.