ಬೆಂಗಳೂರು : ರಾಜ್ಯದ ವಿಧಾನಮಂಡಲದ ಉಭಯಸದನಗಳನ್ನು ಉದ್ದೇಶಿಸಿ ಮಾನ್ಯ ರಾಜ್ಯಪಾಲರು ಇಂದು ಮಾಡಿದ ಭಾಷಣವು ನಮ್ಮ ರಾಜ್ಯವು ಪ್ರಗತಿಯತ್ತ ಮುನ್ನಡೆಯುತ್ತಿರುವ ಮುನ್ನೋಟವಾಗಿದೆ.
ರಾಜ್ಯ ಸರ್ಕಾರವು ತಂದ ಗ್ಯಾರಂಟಿ ಯೋಜನೆಗಳಿಂದ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಯಿಂದ ಹೊರಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿರುವುದು ನಮ್ಮ ಗ್ಯಾರಂಟಿ ಯೋಜನೆಗಳು ಸಾಧಿಸಿದ ಗುರಿಯನ್ನು ಸಾರಿ ಹೇಳುತ್ತದೆ. ಇದೊಂದು ಜಾಗತಿಕ ದಾಖಲೆಯೂ ಹೌದು.
ಕರ್ನಾಟಕವು ತೆರಿಗೆ ಸಂಗ್ರಹಸಿ ದೇಶಕ್ಕೆ ನೀಡುವ ವಿಚಾರದಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆದರೆ ನಮ್ಮ ತೆರಿಗೆ ಪಾಲು ಪಡೆಯುವ ವಿಚಾರದಲ್ಲಿ ಹತ್ತನೇ ಸ್ಥಾನದಲ್ಲಿದ್ದು ನಮ್ಮ ನ್ಯಾಯಯುತ ತೆರಿಗೆ ಪಾಲನ್ನು ಪಡೆಯಲು ಅಗತ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡಲಿದೆ.
ಕರ್ನಾಟಕವು ಈ ವರ್ಷ ತೀವ್ರ ಬರಕ್ಕೆ ತುತ್ತಾಗಿದ್ದು 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅವುಗಳಲ್ಲಿ 196 ತಾಲೂಕುಗಳು ತೀವ್ರ ಬರಪೀಡಿತ ತಾಲೂಕುಗಳಾಗಿವೆ. ಬರ ನಿರ್ವಹಣೆಗಾಗಿ 18,171 ಕೋಟಿ ಹಣಕ್ಕೆ ಮನವಿ ಸಲ್ಲಿಸಿದ್ದರೂ ಕೇಂದ್ರದಿಂದ ಇದುವರೆಗೂ ಯಾವುದೇ ಹಣ ಬಿಡುಗಡೆಯಾಗಿಲ್ಲ.
ಇನ್ನು ಕೇವಲ ಎಂಟು ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ 77,000 ಕೋಟಿ ಬಂಡವಾಳ ಹರಿದು ಬಂದಿದೆ. ಜಿಎಸ್ಟಿ ಸಂಗ್ರಹಣೆಯಲ್ಲಿ ಜನವರಿ ತಿಂಗಳಲ್ಲಿ ದೇಶದಲ್ಲೇ ನಾವು ಮೊದಲ ಸ್ಥಾನದಲ್ಲಿದ್ದೇವೆ.
ರಾಜ್ಯದಲ್ಲಿ ಅಪೌಷ್ಟಿಕತೆಗೆ ಅಂತ್ಯ ಹಾಡಲು ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ‘ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮ’ ಹಾಗು ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಕ್ರಮಗಳನ್ನು ರಾಜ್ಯಪಾಲರು ಶ್ಲಾಘಿಸಿದ್ದಾರೆ.
ನಮ್ಮ ರಾಜ್ಯದ ಜನಪರ ಯೋಜನೆಗಳು ದೇಶದ ವಿವಿಧ ರಾಜ್ಯಗಳಿಗೆ ಮಾದರಿಯಾಗಿವೆ. ಕರ್ನಾಟಕವು ದೇಶದಲ್ಲೇ ಮಾದರಿ ರಾಜ್ಯ ಎಂಬುದನ್ನು ರಾಜ್ಯಪಾಲರು ಪುನರುಚ್ಚರಿಸಿದ್ದಾರೆ. ಮಾನ್ಯ ರಾಜ್ಯಪಾಲರ ಭಾಷಣವನ್ನು ನಾನು ಸ್ವಾಗತಿಸುತ್ತೇನೆ.