ಬಿಗ್‌ಬಾಸ್ ರಜತ್‌ಗೆ ಪೊಲೀಸ್ ಶಾಕ್; ಬೆದರಿಕೆ, ನಿಂದನೆ ಆರೋಪದಡಿ FIR ದಾಖಲು!

ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ಗೆ ಕಾನೂನು ಸಂಕಷ್ಟ ಎದುರಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದಲ್ಲಿ ರಜತ್ ಅವರನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದ್ದು, ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ.
ದೂರಿನ ಅನ್ವಯ, ರಜತ್ ಅವರು ಫೋನ್ ಕರೆ ಮೂಲಕ ಗಿರೀಶ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. “ಡಾಗ್ ಸತೀಶ್ ಸ್ನೇಹವನ್ನು ಬಿಡಬೇಕು” ಎಂದು ಒತ್ತಡ ಹೇರಿರುವ ರಜತ್, “ರಜತ್ ಬುಜ್ಜಿ… ಕಾಲ್ ಮಾಡ್ತಾ ಇದೀನಿ, ವಾಪಸ್ ಕಾಲ್ ಮಾಡ್ತೀರಾ ಇಲ್ವಾ? ನಾವೇ ಒಳಗೆ ಹಾಕಿಸಬೇಕಾ?” ಎಂಬ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಫೋನ್ ಸಂಭಾಷಣೆಯ ವೇಳೆ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಕೆ.ಆರ್ ಪುರಂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ರಜತ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ತಮ್ಮ ನೇರ ನುಡಿ ಮತ್ತು ಆಕ್ರಮಣಕಾರಿ ಸ್ವಭಾವದಿಂದಲೇ ಗುರುತಿಸಿಕೊಂಡಿದ್ದ ರಜತ್, ಈಗ ಹೊರಗಿನ ಪ್ರಪಂಚದಲ್ಲೂ ವಿವಾದದ ಸುಳಿಗೆ ಸಿಲುಕಿದ್ದಾರೆ.




