Top Newsರಾಜಕೀಯಸುದ್ದಿ

ಪೋಕ್ಸೋ ಕೇಸ್‌ – ಯಡಿಯೂರಪ್ಪ ಬಂಧನಕ್ಕೆ ಸಿಐಡಿ ಸಿದ್ಧತೆ!

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ  ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲು ಸಿಐಡಿ ಮುಂದಾಗಿದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

ಹೌದು. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಪುತ್ರ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶಿಸಿ ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆ ನೋಡಿ ಬಿಎಸ್‌ವೈ ಬಂಧನವಾಗುತ್ತಾ ಎಂಬ ಪ್ರಶ್ನೆ ಈಗ ಮೂಡಿದೆ.

ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಬಿಎಸ್‌ವೈ ವಿರುದ್ಧ ಸಂತ್ರಸ್ತೆಯ ತಾಯಿ ದೂರು ನೀಡಿದ್ದು, ಮಾರ್ಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಸರ್ಕಾರ ಇದನ್ನು ಸಿಐಡಿಗೆ ವರ್ಗಾಯಿಸಿತ್ತು. ಏಪ್ರಿಲ್‌ 12 ರಂದು ತನಿಖಾಧಿಕಾರಿಯ ಮುಂದೆ ಯಡಿಯೂರಪ್ಪ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು.

ಈ ಪ್ರಕರಣ ದಾಖಲಾದ ನಂತರ ಸಂತ್ರಸ್ತೆ ಮೃತಪಟ್ಟಿದ್ದಾರೆ. ಈಗ ಸಂತ್ರಸ್ತೆಯ ಪುತ್ರ ಹೈಕೋರ್ಟ್‌ ಮೆಟ್ಟಿಲೇರಿ ಪ್ರಕರಣದ ದಾಖಲಾಗಿ ಮೂರು ತಿಂಗಳಾದರೂ ಯಾವುದೇ ಬೆಳವಣಿಗೆ ನಡೆದಿಲ್ಲ. ಇಷ್ಟು ದಿನವಾದರೂ ಯಡಿಯೂರಪ್ಪ ಅವರನ್ನು ಬಂಧಿಸಿಲ್ಲ ಎಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ಬೆನ್ನಲ್ಲೇ ಬುಧವಾರ ಯಡಿಯೂರಪ್ಪನವರಿಗೆ ಇಂದೇ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್‌ ಜಾರಿ ಮಾಡಿತ್ತು. ಆದರೆ ಬುಧವಾರ ಯಡಿಯೂರಪ್ಪ ದೆಹಲಿಯಲ್ಲಿದ್ದರು. ವಿಚಾರಣೆಗೆ ಹಾಜರಾಗದ ಕಾರಣ ಜಾಮೀನು ರಹಿತ ವಾರೆಂಟ್‌ಗೆ ಸಿಐಡಿ ಈಗ 42ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಕೋರ್ಟ್‌ ಪುರಸ್ಕರಿಸಿದರೆ ಅರೆಸ್ಟ್ ವಾರೆಂಟ್ ಪಡೆದು ಯಡಿಯೂರಪ್ಪ ಅವರನ್ನು ಸಿಐಡಿ ಬಂಧಿಸುವ ಸಾಧ್ಯತೆಯಿದೆ. ಸದ್ಯ ಈಗ ಯಡಿಯೂರಪ್ಪ ದೆಹಲಿಯಲ್ಲಿದ್ದು ಜೂನ್‌ 17ಕ್ಕೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.

ಪ್ರಕರಣ ಸಂಬಂಧ ಸಿಐಡಿ ಒಂದಷ್ಟು ಸಾಕ್ಷ್ಯ ಕಲೆ ಹಾಕಿದೆ. ದೂರುದಾರೆ ನೀಡಿದ್ದ ವಿಡಿಯೋ ಪಡೆದು ಪರಿಶೀಲನೆ ಜೊತೆಗೆ ಬಾಲಕಿ, ಬಿಎಸ್‌ವೈ ಧ್ವನಿ ಸಂಗ್ರಹ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯ  ರವಾನೆ ಮಾಡಿದೆ. ಈ ಸಾಕ್ಷ್ಯಗಳ ಆಧಾರದ ಮೇಲೆ ಯಡಿಯೂರಪ್ಪ ಅವರನ್ನು ಬಂಧನ ಮಾಡುವ ಸಾಧ್ಯತೆಯಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button