ದೇಶದಾದ್ಯಂತ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದೆ. ಕನ್ನಡದಲ್ಲೂ ತಯಾರಾಗಿರುವ ಅನೇಕ ಸಿನಿಮಾಗಳು ದೇಶಭಕ್ತಿ ಸಾರಿ ಹೇಳುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ದೇಶಭಕ್ತಿ ಚಿತ್ರಗಳು ದೊಡ್ಡ ಯಶಸ್ಸು ಕಂಡಿವೆ. ಇಲ್ಲಿ ಸ್ವಾತಂತ್ರ್ಯದ ಕುರಿತು ಮೈನವಿರೇಳಿಸುವ ಕನ್ನಡದ ಈ ದೇಶಭಕ್ತಿ ಸಿನಿಮಾಗಳ ಪಟ್ಟಿ ಇಲ್ಲಿದೆ.
‘ಕಿತ್ತೂರು ರಾಣಿ ಚೆನ್ನಮ್ಮ’
ಬಿ.ಆರ್. ಪಂಥುಲು ನಿರ್ದೇಶನದ ‘ಕಿತ್ತೂರು ರಾಣಿ ಚೆನ್ನಮ್ಮ’ (1962) ದೇಶ ಭಕ್ತಿ ಸಾರುವ ಪ್ರಮುಖ ಸಿನಿಮಾ ಆಗಿದೆ. ಬ್ರಿಟಿಷರ ವಿರುದ್ಧ ಹೋರಾಡುವ ರಾಣಿ ಚೆನ್ನಮ್ಮನಾಗಿ ನಟಿ ಬಿ.ಸರೋಜಾದೇವಿ ನಟಿಸಿದ್ದರು. ಸಿನಿಮಾ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದಿದ್ದು, ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತ್ತು. ರಾಣಿ ಚೆನ್ನಮ್ಮನ ಕಥೆಯನ್ನು ವಿವರಿಸುವ ಈ ಸಿನಿಮಾದಲ್ಲಿ . ಬಿ.ಸರೋಜಾದೇವಿ ಚೆನ್ನಮ್ಮನ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರ 9 ನೇ ರಾಷ್ಟ್ರ ಪ್ರಶಸ್ತಿ ಪಡೆಯಿತು.
ವೀರ ಸಿಂಧೂರ ಲಕ್ಷ್ಮಣ
ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಬಸವರಾಜ್, ಕೆ,ಎಸ್.ಅಶ್ವಥ್, ಸುಧೀರ್, ವಜ್ರಮುನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಮಂಜುಳಾ, ಅನುರಾಧಾ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ್ರು. ಈ ಚಿತ್ರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗ ಸಿಂದೂರಿನಲ್ಲಿ ಜನಿಸಿದ ಸ್ವಾತಂತ್ರ ಹೋರಾಟಗಾರ ಲಕ್ಷ್ಮಣನ ಕಥೆ ಹೇಳುತ್ತದೆ.
ಮುತ್ತಿನ ಹಾರ ಸಿನಿಮಾ
ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಜಯಮಾಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇಂದಿಗೂ ಈ ಸಿನಿಮಾ ಹಾಡುಗಳನ್ನು ಜನ ಗುನುಗುತ್ತಲಿರುತ್ತಾರೆ. ಚಿತ್ರದಲ್ಲಿ ರಾಮಕುಮಾರ್, ಪ್ರಕಾಶ್ ರಾಜ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಸೈನಿಕನ ಜೀವನದ ಬಗ್ಗೆ ವಿವರಿಸಲಾಗಿದೆ .ಈ ಚಿತ್ರದ ವಿಷ್ಣುವರ್ಧನ್ ಕೊಡಗಿನ ವೀರ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಈ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆಯಿತು.
ಸಂಗೊಳ್ಳಿ ರಾಯಣ್ಣ
ರಂಗಕಲಾವಿದರೇ ನಟಿಸಿದ್ದ ‘ಸಂಗೊಳ್ಳಿ ರಾಯಣ್ಣ’ ಸಿನೆಮಾ 1967ರಲ್ಲಿ ತೆರೆಕಂಡಿತ್ತು. ಅನಂತ್ ಹಿರೇಗೌಡರ್ ಚಿತ್ರದ ನಿರ್ದೇಶಕರಾಗಿದ್ರು. ಗಾಯಕಿ ಲತಾ ಮಂಗೇಶ್ಕರ್ ಈ ಚಿತ್ರದ ‘ಬೆಳ್ಳಾನೆ ಬೆಳಗಾಯಿತು’ ಹಾಡಿಗೆ ದನಿಯಾಗಿದ್ದರು. 2012ರಲ್ಲಿ ನಾಗಣ್ಣ ನಿರ್ದೇಶನದಲ್ಲಿ ಮತ್ತೊಮ್ಮೆ ‘ಸಂಗೊಳ್ಳಿ ರಾಯಣ್ಣ’ ಸಿನಿಮಾ ತೆರೆಗೆ ಬಂದಿತ್ತು. ಅದ್ಧೂರಿ ಬಜೆಟ್, ಬಹುತಾರಾಗಣದಲ್ಲಿ ತಯಾರಾದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ದರ್ಶನ್ ಅಭಿನಯಿಸಿದ್ದರು.
ಮೈಸೂರು ಮಲ್ಲಿಗೆ
ಟಿ.ಎಸ್.ನಾಗಾಭರಣ ನಿರ್ದೇಶನದ ಮೈಸೂರು ಮಲ್ಲಿಗೆ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಮಂಜು ಮತ್ತು ಸುಧಾರಾಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಸುಂದರರಾಜ್, ದತ್ತಣ್ಣ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಸ್ಫೂರ್ತಿಯಿಂದಲೇ ಹಿಂದಿಯಲ್ಲಿ ಅನಿಲ್ ಕಪೂರ್ ನಾಯಕನಾಗಿ ನಟಿಸಿದ 1942: ಎ ಲವ್ ಸ್ಟೋರಿ ಚಿತ್ರ ನಿರ್ಮಾಣವಾಯಿತು. ಕೆ.ಎಸ್.ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕೃತಿಯಲ್ಲಿನ ಗೀತೆಗಳ ಹಿನ್ನಲೆಯಲ್ಲಿ ಚಿತ್ರದ ಕಥೆ ಸಾಗುತ್ತದೆ. ಒಬ್ಬ ನವವಿವಾಹಿತ ಸಾಮಾನ್ಯ ಶಿಕ್ಷಕ ಸ್ವಾತಂತ್ರ ಹೋರಾಟಗಾರನಾಗುವ ಕತೆಯನ್ನು ಚಿತ್ರ ಹೊಂದಿದೆ.
ವೀರಪ್ಪನಾಯ್ಕ
ನಟ ವಿಷ್ಣುವರ್ಧನ್ ಅಭಿಯನದ ವೀರಪ್ಪನಾಯ್ಕ (1999) ಚಿತ್ರದಲ್ಲಿ ಗಾಂಧಿವಾದ ಮತ್ತು ನಕ್ಸಲಿಸಂನ ಸಂಘರ್ಷದ ಚಿತ್ರಣವಿತ್ತು. ಎಸ್.ನಾರಾಯಣ್ ಚಿತ್ರದ ನಿರ್ದೇಶಕ. ಶಿವರಾಜ್‌ಕುಮಾರ್ ಅಭಿನಯದ ‘ಸಾರ್ವಭೌಮ’, ಯೋಗೀಶ್ವರ್‌ರವರ ಸೈನಿಕ ಚಿತ್ರಗಳಲ್ಲಿ ಯೋಧರ ಕಥೆಗಳಿದ್ದವು. ಜೈಹಿಂದ್’, ಎಕೆ 47 ವಂದೇಮಾತರಂ, ಇಂಡಿಪೆಂಡೆನ್ಸ್ ಡೇ ಸೇರಿದಂತೆ ಕೆಲವು ಕಮರ್ಷಿಯಲ್ ಚಿತ್ರಗಳಲ್ಲಿ ರಾಷ್ಟ್ರಪ್ರೇಮದ ಝಲಕ್ ಇತ್ತು. ಬ್ರಿಟೀಷರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕನ ಕುರಿತ ಚಿತ್ರ ಸೆಟ್ಟೇರುವ ಸೂಚನೆಯಿದೆ.
ಸಿಪಿ ಯೋಗೀಶ್ವರ್ ನಟಿಸಿರುವ ‘ಸೈನಿಕ’ ಸಿನಿಮಾ ಸಹ ದೇಶಪ್ರೇಮ ಸಾರುವ ಸಿನಿಮಾ. ಇದು ಬ್ರಿಟೀಷರ ವಿರುದ್ಧದ ಹೋರಾಟದ ಕತೆ ಅಲ್ಲದಿದ್ದರೂ ಈ ಸಿನಿಮಾ ಸೈನಿಕರ ದೇಶಪ್ರೇಮ ಅವರ ಹೊರಾಟ, ತ್ಯಾಗ-ಬಲಿದಾನಗಳನ್ನು ಸಾರುವ ಸಿನಿಮಾ. ಈ ಬ್ಲಾಕ್ ಬಸ್ಟರ್ ಸಿನಿಮಾದ ಹಾಡುಗಳು ಸಹ ಬಹಳ ಜನಪ್ರಿಯ.