ಬೆಂಗಳೂರು: ನಿಮಗೆಲ್ಲಾ ತಿಳಿದಿರುವಂತೆ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ರಾಜ್ಯದಲ್ಲಿ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ನನ್ನ ಪುತ್ರ ಸಾಗರ್ ಈಶ್ವರ್ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ನಾವು ಈ ಬಾರಿ ಕ್ಷೇತ್ರದ ಬಹುತೇಕ ಕಡೆಗಳಲ್ಲಿ ಪ್ರಚಾರ ಮಾಡಿದ್ದು, ಹೋದ ಕಡೆಯಲ್ಲೆಲ್ಲಾ ಅಭೂತಪೂರ್ವವಾದ ಜನ ಬೆಂಬಲ ವ್ಯಕ್ತವಾಗುತ್ತಿದೆ. ಎಲ್ಲೆಡೆ ಕಾಂಗ್ರೆಸ್ ಪರವಾದ ಅಲೆ ಕಾಣಿಸುತ್ತಿದೆ. ಈ ಎಲ್ಲ ಸುದ್ದಿಗಳನ್ನೂ ನಿಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ, ಮಾಧ್ಯಮಗಳಲ್ಲಿ ಬಿತ್ತರಿಸಿದ ನಿಮಗೆಲ್ಲರಿಗೂ ನಾನು ಈ ಪತ್ರಿಕಾ ಗೋಷ್ಠಿಯಲ್ಲಿ ಧನ್ಯವಾದ ಸಲ್ಲಿಸಲು ಇಚ್ಛಿಸುತ್ತೇನೆ ಎಂದು ಈಶ್ವರ ಖಂಡ್ರೆ ಹೇಳಿದರು.
ನನ್ನ ರಾಜಕೀಯ ಅನುಭವದಲ್ಲಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾರ ಯಾರಿಗೆ ಮತ ಹಾಕಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿದ್ದಾರೆ ಎನಿಸುತ್ತಿದೆ. ಜನರ ನಾಡಿ ಮಿಡಿತ ನೋಡಿದಾಗ ಬೀದರ್ ಮತ್ತು ರಾಜ್ಯದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ವೇದ್ಯವಾಗುತ್ತಿದೆ ಎಂದರು.
ರಾಜ್ಯದಲ್ಲಿ ಕಳೆದ ಬಾರಿ ಅಂದರೆ 2019ರಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಅದಕ್ಕೆ ಕಾರಣಗಳೂ ನಿಮಗೆಲ್ಲರಿಗೂ ತಿಳಿದಿದೆ. ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ದೊಡ್ಡ ತಪ್ಪು ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದರು, ಅದೇ ರೀತಿ ಕಾಂಗ್ರೆಸ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರೂ ಬಿಜೆಪಿಗೆ ಮತ ಹಾಕಿದರು, ಪುಲ್ವಾಮಾ ಪ್ರಭಾವವೂ ಕಳೆದ ಚುನಾವಣೆಯ ಮೇಲಿತ್ತು.
ಆದರೆ ಈ ಬಾರಿ ಜನತೆ ಬಿಜೆಪಿಯ ಸುಳ್ಳುಗಳಿಂದ, ಜನವಿರೋಧಿ, ರೈತ ವಿರೋಧಿ ನೀತಿಗಳಿಂದ ರೋಸತ್ತು ಹೋಗಿದ್ದಾರೆ. ಅದೇ ವೇಳೆ ನಮ್ಮ ಸರ್ಕಾರದ ಗ್ಯಾರಂಟಿಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪಿದ್ದು, ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಇಮ್ಮಡಿಯಾಗಿದೆ. ಹೀಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಅಪೇಕ್ಷೆ ಪಡುತ್ತಿದ್ದಾರೆ. ನಮ್ಮ ಪಂಚನ್ಯಾಯ ಮತ್ತು 25 ಗ್ಯಾರಂಟಿಗಳ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 18 ರಿಂದ 20 ಸ್ಥಾನಗಳಲ್ಲಿ ಗೆಲ್ಲುತ್ತದೆ. ಅದೇ ರೀತಿ ಬೀದರ್ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ ಖಂಡ್ರೆ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮಾತನಾಡಿದರು.