ಅನೇಕಲ್ : ಕಾಡು ನಶಿಸುತ್ತಿದೆ. ಪದೇ ಪದೇ ಕ್ರೂರ ಪ್ರಾಣಿಗಳು ನಾಡಿಗೆ ಎಂಟ್ರಿ ಕೊಡುತ್ತಿವೆ. ಅದರಲ್ಲೂ ಚಿರತೆಗಳು ಪದೇ ಪದೇ ಪ್ರತ್ಯಕ್ಷವಾಗುತ್ತಿರೋದು ಕಾಡಂಚಿನ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದೆ. ಇದೀಗ ಬೆಂಗಳೂರಿನ ಹುಸ್ಕೂರು ರಸ್ತೆಯಲ್ಲಿ ತೆರಳುತ್ತಿದ್ದ ಕಾರು ಚಾಲಕನಿಗೆ ಚಿರತೆ ಪ್ರತ್ಯಕ್ಷವಾಗಿ ಮೊಬೈಲ್ನಲ್ಲಿ ಅದರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಆ ಫೋಟೋ ಇದೀಗ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದೆ.

ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ ರಸ್ತೆಯಲ್ಲಿ ಇಂದು ಮುಂಜಾನೆ ನಸುಕಿನ 4ಗಂಟೆಯ ಸುಮಾರಿಗೆ ಕಾರು ಚಾಲಕನ ಕಣ್ಣಿಗೆ ಚಿರತೆ ಕಂಡು ಬಂದಿದೆ. ಈ ಸುದ್ದಿ ತಿಳಿಯುತ್ತಲೇ ಆನೇಕಲ್ ಅರಣ್ಯಾಧಿಕಾರಿಗಳು ಬೋನಿಟ್ಟು ಚಿರತೆ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ ಕಳೆದ ವಾರವಷ್ಟೇ ಚಿರತೆಯೊಂದು ಕೋಳಿಯನ್ನು ಬೇಟೆಯಾಡಿ ತಿಂದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ಚಿರತೆ ಓಡಾಟಕ್ಕೂ ಈಗಿನ ಚಿರತೆ ಓಡಾಟಕ್ಕೂ ನೂರು ಮೀಟರ್ ಅಂತರವಷ್ಟೇ ಇದ್ದು. ಇದೇ ಚಿರತೆಯೇ ಇರಬಹುದು ಎಂದು ಸಹಜವಾಗಿ ಅಂದಾಜಿಸಲಾಗಿದೆ.

ಚಿರತೆ ಕಂಡ ಪ್ರದೇಶದಲ್ಲಿ 400 ಎಕರೆಯಷ್ಟು ಸಿಲ್ಕ ಫಾರ್ಂ ಇದ್ದು ಚಿರತೆ ಚಲನ ವಲನಕ್ಕೆ ಅನುಕೂಲ ಒದಗಿಸಿದೆ. ಅಲ್ಲದೆ ಬೆಂಗಳೂರು ಪೂರ್ವ ವಲಯದಲ್ಲಿನ ಚಿರತೆ ಆನೇಕಲ್ ವಲಯಕ್ಕೆ ಬಂದಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಚಿರತೆ ಒಂದೆಡೆ ನಿಲ್ಲದೆ ಓಡಾಡುತ್ತಿರುವುದರಿಂದ ಸಹಜವಾಗಿ ಗ್ರಾಮಗಳಲ್ಲಿ ನಾಯಿಗಳ ಬೇಟೆಗೆ ರಾತ್ರಿ ವೇಳೆ ದಾಳಿಯಿಡುತ್ತದೆ. ಚಿರತೆಗಾಗಿ ಅರಣ್ಯಾಧಿಕಾರಿಗಳು ಬೋನು ಇರಿಸಿದ್ದಾರೆ. ಆದರೆ ಆ ಬೋನಿನ ಸುತ್ತಲೇ ಗಿರಕಿ ಹೊಡೆಯುತ್ತಿರುವ ಚಿರತೆ ಚಾಲಾಕಿಯಾಗಿ ತಪ್ಪಿಸಿಕೊಳ್ಳುತ್ತಿದೆ. ಅತೀ ಶೀಘ್ರದಲ್ಲಿ ಚಿರತೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.