ನವದೆಹಲಿ: ಸಂಸತ್ತಿನ ಮಹತ್ವದ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಲಿದ್ದಾರೆ.
ಮೊದಲ ಹಂತ ಜನವರಿ 28ರಿಂದ ಫೆಬ್ರವರಿ 13 ರವರೆಗೆ ಮತ್ತು ಎರಡನೇ ಹಂತ ಮಾರ್ಚ್ 9ರಿಂದ ಏಪ್ರಿಲ್ 2ರವರೆಗೆ ಅಧಿವೇಶನ ನಡೆಯಲಿದೆ. ಜನವರಿ 31 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು. ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ.
ಇನ್ನು ಅಧಿವೇಶನವು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸರ್ವಪಕ್ಷ ಸಭೆ ನಡೆದಿದೆ. ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ, ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನು ಕಟ್ಟಿಹಾಕಲು ಪ್ರತಿಪಕ್ಷಗಳು ಸಜ್ಜಾಗಿವೆ. ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಕಾರ್ಯತಂತ್ರ ಗುಂಪಿನ ಸಭೆಯಲ್ಲಿ ಉದ್ಯೋಗ ಖಾತರಿ ಯೋಜನೆ, ಪರಿಸರ ಸಮಸ್ಯೆ ಹಾಗೂ ಪ್ರಮುಖ ಕಾಯ್ದೆಗಳ ಕುರಿತು ಚರ್ಚಿಸಲಾಗಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬೆಳಿಗ್ಗೆ ವಿರೋಧ ಪಕ್ಷಗಳ ಜಂಟಿ ಸಭೆ ಕರೆದಿದ್ದು, ಸದನದಲ್ಲಿ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಕುರಿತು ಅಂತಿಮ ಕಾರ್ಯತಂತ್ರ ರೂಪಿಸಲಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಮಸೂದೆ ಮತ್ತು ಇತ್ತೀಚಿನ ಆರ್ಥಿಕ ಸುಧಾರಣೆಗಳ ಕುರಿತು ಸದನದಲ್ಲಿ ಬಿಸಿಬಿಸಿ ಚರ್ಚೆ ನಡೆಯುವ ಸಾಧ್ಯತೆಯಿದೆ.


