ಕ್ರೈಂ ಸ್ಟೋರಿದೇಶ/ವಿದೇಶಸುದ್ದಿ

ಮೆಕ್ಸಿಕನ್ ಸೇನೆಯಿಂದ ಕಾರ್ಯಾಚರಣೆ; ಕುಖ್ಯಾತ ಡ್ರಗ್ ಲಾರ್ಡ್ ‘ಎಲ್ ಮೆಂಚೊ’ ಹತ್ಯೆ

ಮೆಕ್ಸಿಕೋ ಸಿಟಿ: ಮೆಕ್ಸಿಕನ್ ಸೇನೆಯು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ವಿಶ್ವದ ಅತ್ಯಂತ ಭೀಕರ ಮಾದಕವಸ್ತು ಜಾಲದ ನಾಯಕ ನೆಮೆಸಿಯೊ ‘ಎಲ್ ಮೆಂಚೊ’ ಒಸೆಗುರಾ (59) ಹತ್ಯೆಯಾಗಿರುವುದು ಕ್ರೈಮ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ ಮುಖ್ಯಸ್ಥನಾಗಿದ್ದ ಈತನ ಹುಡುಕಿಕೊಟ್ಟವರಿಗೆ ಬರೋಬ್ಬರಿ 15 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಘೋಷಿಸಲಾಗಿತ್ತು. ಟಪಲ್ಪಾ ಪಟ್ಟಣದಲ್ಲಿ ನಡೆದ ಸೈನಿಕರೊಂದಿಗಿನ ನೇರ ಘರ್ಷಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತ, ಚಿಕಿತ್ಸೆಗಾಗಿ ಮೆಕ್ಸಿಕೊ ನಗರಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಸೇನೆ ಅಧಿಕೃತವಾಗಿ ಘೋಷಿಸಿದೆ.

ಈ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಆತನ ಬೆಂಬಲಿಗರು ಮತ್ತು ಕಾರ್ಟೆಲ್ ಸದಸ್ಯರು ಮೆಕ್ಸಿಕೋದಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಇಳಿದಿದ್ದಾರೆ. ಪಶ್ಚಿಮ ಜಲಿಸ್ಕೊ ರಾಜ್ಯದ ಸುಮಾರು 20ಕ್ಕೂ ಹೆಚ್ಚು ಪ್ರಮುಖ ರಸ್ತೆಗಳನ್ನು ಬಂದೂಕುಧಾರಿಗಳು ತಡೆದಿದ್ದು, ಸಾರ್ವಜನಿಕರ ಕಾರು ಮತ್ತು ಟ್ರಕ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕುತ್ತಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್, ದೇಶದ ನಾಗರಿಕರು ಶಾಂತವಾಗಿರಬೇಕು ಮತ್ತು ಸರ್ಕಾರವು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಭರವಸೆ ನೀಡಿದ್ದಾರೆ.

ಒಂದು ಕಾಲದಲ್ಲಿ ಕುಖ್ಯಾತ ಡ್ರಗ್ ಲಾರ್ಡ್‌ಗಳಾದ ‘ಎಲ್ ಚಾಪೊ’ ಮತ್ತು ಇಸ್ಮಾಯಿಲ್ ಜಾಂಬಾಡಾ ಅವರ ನಂತರ ಮೆಕ್ಸಿಕೋದ ಅತಿದೊಡ್ಡ ಮಾದಕವಸ್ತು ದೊರೆಯಾಗಿ ‘ಎಲ್ ಮೆಂಚೊ’ ಹೊರಹೊಮ್ಮಿದ್ದ. ಈತನ ಹತ್ಯೆಯು ಜಾಗತಿಕ ಮಾದಕವಸ್ತು ಸರಬರಾಜು ಜಾಲಕ್ಕೆ ದೊಡ್ಡ ಪೆಟ್ಟು ನೀಡಿದಂತಾಗಿದ್ದರೂ, ಮೆಕ್ಸಿಕೋದಾದ್ಯಂತ ಭುಗಿಲೆದ್ದಿರುವ ಹಿಂಸಾಚಾರವು ಸಾಮಾನ್ಯ ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ.l

Comments (0)

Your email address will not be published. Required fields are marked *

Back to top button