ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಸಜ್ಜಾಗಿದೆ. ಇತ್ತೀಚೆಗೆ ಕಣಿವೆಯಲ್ಲಿ ಮತ್ತೆ ಭಯೋತ್ಪಾದನೆಯನ್ನು ಹೆಚ್ಚಿಸಲು ಭಯೋತ್ಪಾದಕರು ಪೂಂಚ್ ಮತ್ತು ರಜೌರಿ ಪ್ರದೇಶಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಅವರು ಪಿರ್ ಪಂಜಾಲ್ ಪರ್ವತಗಳ ಅರಣ್ಯದಲ್ಲಿ ಅಡಗಿಕೊಂಡು ಭದ್ರತಾ ಸಿಬ್ಬಂದಿಗೆ ಸವಾಲು ಹಾಕುತ್ತಿದ್ದಾರೆ. ಈ ಪ್ರದೇಶದ ಗುಹೆಗಳು, ಬೆಟ್ಟಗಳು ಮತ್ತು ಕಾಡುಗಳು ಭಯೋತ್ಪಾದಕರ ಆಶ್ರಯ ತಾಣವಾಗಿ ಮಾರ್ಪಟ್ಟಿವೆ, ಅವುಗಳನ್ನು ತಡೆಯುವುದು ಕಷ್ಟಕರವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ನಡೆದ ಉಗ್ರರ ದಾಳಿಯಲ್ಲಿ ಅಧಿಕಾರಿಗಳು ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದಾರೆ.
ಭಯೋತ್ಪಾದಕರ ಸದೆಬಡಿಯಲು ಸೇನೆ ಸಿದ್ಧ
ಈ ಹಿನ್ನೆಲೆಯಲ್ಲಿ ಭಯೋತ್ಪಾದಕರನ್ನು ಸದೆಬಡಿಯಲು ಸೇನೆ ‘ಆಪರೇಷನ್ ಸರ್ವ ಶಕ್ತಿ’ಕಾರ್ಯಾಚರಣೆಯನ್ನು ಆರಂಭಿಸುತ್ತಿದೆ. ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎರಡೂ ಕಡೆಯಿಂದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲು ಸೇನೆ ನಿರ್ಧರಿಸಿದೆ. ಶ್ರೀನಗರದಲ್ಲಿ ಚಿನಾರ್ ಕಾರ್ಫ್ಸ್ ಮತ್ತು ನಗ್ರೋಟಾದಲ್ಲಿ ವೈಟ್ ನೈಟ್ ಕಾರ್ಫ್ಸ್‌ನೊಂದಿಗೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಸಂಬಂಧಿತ ಮೂಲಗಳು ತಿಳಿಸಿವೆ.
ಸರ್ಪವಿನಾಶ್ ಎಂಬ ಖಡಕ್ ಕಾರ್ಯಾಚರಣೆ
ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಹೆಚ್ಚುತ್ತಿರುವ ಪಾಕಿಸ್ತಾನ-ಪ್ರೇರಿತ ಭಯೋತ್ಪಾದನೆಯನ್ನು ನಿಗ್ರಹಿಸಲು ಸಮನ್ವಯದಿಂದ ಕೆಲಸ ಮಾಡಲಿವೆ. ವಿಶೇಷವಾಗಿ ರಜೌರಿ ಮತ್ತು ಪೂಂಚ್ ವಲಯಗಳಲ್ಲಿ ಕಾರ್ಯಾಚರಣೆ ನಡೆಸಲಿವೆ. ಈ ಕಾರ್ಯಾಚರಣೆಯು ದಕ್ಷಿಣ ಪೀರ್ ಪಂಜಾಲ್ ವ್ಯಾಪ್ತಿಯಲ್ಲಿ ಭಯೋತ್ಪಾದನೆಯನ್ನು ತೊಡೆದುಹಾಕಲು 2003 ರಲ್ಲಿ ಕೈಗೊಂಡ ‘ಆಪರೇಷನ್ ಸರ್ಪವಿನಾಶ್’ನಂತೆಯೇ ಇರಲಿದೆ ಎಂದು ತಿಳಿದುಬಂದಿದೆ. ಈ ಕಾರ್ಯಾಚರಣೆ ನಂತರ ಬಹುತೇಕ ಭಯೋತ್ಪಾದನೆ ಕೃತ್ಯ ಅಂತ್ಯಗೊಂಡಿತ್ತು.
ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಇತ್ತೀಚೆಗೆ ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿತ್ವವನ್ನು ನಿಗ್ರಹಿಸಲು ಸೇನಾ ಅಧಿಕಾರಿಗಳು ಮತ್ತು ಗುಪ್ತಚರ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು. ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಭಯೋತ್ಪಾದಕರ ವಿರುದ್ಧ ಸಂಘಟಿತ ಕ್ರಮಕ್ಕಾಗಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇವತ್ತಿನಿಂದಲೇ ಕಾರ್ಯಚರಣೆ ಶುರುವಾಗಲಿದ್ದು, ಉಗ್ರರ ದಮನಕ್ಕೆ ನಮ್ಮ ಭಾರತೀಯ ಯೋಧರು ಸಜ್ಜಾಗಿದ್ದಾರೆ.