ಆಡಳಿತಾತ್ಮಕವಾಗಿ ಎಲ್ಲಾ ವಿಧದಲ್ಲೂ ವೈಫಲ್ಯ ಹೊಂದಿರುವ ಕೇಂದ್ರ ಸರ್ಕಾರವು, ಕಳೆದ ಹತ್ತು ವರ್ಷಗಳಿಂದಲೂ ಚುನಾವಣೆಗಳನ್ನು ಮಾಡುವುದರಲ್ಲಿ ಮತ್ತು ಕೋಮು ದ್ವೇಷದ ಮೂಲಕ ದೇಶದ ಆಂತರಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸುವುದರಲ್ಲಿ ತೋರಿಸುವ ಆಸಕ್ತಿಯನ್ನು, ಬೇರಾವ ಒಳ್ಳೆಯ ವಿಷಯದಲ್ಲಿ ತೋರಿಸಿದ್ದನ್ನು ನಾನು ಕಾಣಲಿಲ್ಲ.
ಇದೀಗ ನಮ್ಮ ದೇಶದಲ್ಲಿರುವುದು ಒಕ್ಕೂಟ ವ್ಯವಸ್ಥೆ ಎಂಬ ಸಂಗತಿಯನ್ನು ಸಂಪೂರ್ಣವಾಗಿ ಮರೆತಿರುವ ಕೇಂದ್ರ ಸರ್ಕಾರವು ಒಂದು ದೇಶ ಒಂದು ಚುನಾವಣೆಯನ್ನು ಮಾಡಲು ಹೊರಟಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.ನೆಲ ಜಲ ಮತ್ತು ಭಾಷೆಯ ವಿಷಯದಲ್ಲಿ ಸಾಕಷ್ಟು ವೈವಿಧ್ಯಮಯ ಸನ್ನಿವೇಶವನ್ನು ಹೊಂದಿರುವ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡನೆ ಆದ ಮೇಲೆ ಒಕ್ಕೂಟ ವ್ಯವಸ್ಥೆಯ ಭಾಗವಾಗಿ ತಮ್ಮದೇ ಆದ ಕೆಲವೊಂದು ಅಧಿಕಾರವನ್ನು ಪಡೆದಿವೆ.
ಹೀಗಿರುವ ರಾಜ್ಯಗಳಿಗೆ ಇರುವಂತಹ ಚುನಾವಣಾ ವ್ಯಾಪ್ತಿಯನ್ನು ಬದಲಿಸುವಂತಹ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ರಾಜ್ಯದ ಅಸ್ತಿತ್ವವನ್ನು ವಿಪರೀತವಾಗಿ ಅವಮಾನಿಸುತ್ತಿದೆ.ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಿಲ್ಲಬೇಕಾದರೆ, ಆಯಾ ರಾಜ್ಯಗಳೇ ಚುನಾವಣಾ ವ್ಯವಸ್ಥೆ ನಡೆಯಲು ಹಣಕಾಸನ್ನು ಒದಗಿಸಬೇಕು. ( State Funding)
ಆಗ ಮಾತ್ರ ಚುನಾವಣಾ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬಹುದು.
ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಯೋಚಿಸಬೇಕೇ ವಿನಃ, ಒಂದು ದೇಶ ಒಂದು ಚುನಾವಣೆ ಎಂಬುದಾಗಿ ಅಲ್ಲ.
ಇನ್ನೂ ಮುಖ್ಯವಾಗಿ ನೋಡುವುದಾದರೆ ಕಳೆದ ಬಾರಿ ಸೋಲುವ ಭಯದಿಂದ ಲೋಕಸಭೆ ಚುನಾವಣೆಯನ್ನೇ ಏಳು ಹಂತದಲ್ಲಿ ನಡೆಸಿದ ಇವರು, ಜಮ್ಮು ಮತ್ತು ಕಾಶ್ಮೀರ ಚುನಾವಣೆಯನ್ನು ಒಟ್ಟಾಗಿ ನಡೆಸಿದರೆ ಎಲ್ಲಿ ಅದರ ಮೇಲಿನ ನಿಯಂತ್ರಣ ಕೈತಪ್ಪುವುದೋ ಎಂದು ಹೆದರಿ ಪ್ರತ್ಯೇಕವಾಗಿ ಈ ರಾಜ್ಯಗಳ ಚುನಾವಣೆ ನಡೆಸುತ್ತಿದ್ದಾರೆ.
ಇಂತವರು ಒಂದು ದೇಶ ಒಂದು ಚುನಾವಣೆ ಎನ್ನುವುದು ಒಂದು ಹಾಸ್ಯಾಸ್ಪದ ಸಂಗತಿಯಾಗಿದ್ದು, ಸ್ಪಷ್ಟತೆ ಇಲ್ಲದ ಮತ್ತು ರಾಜ್ಯ ವಿರೋಧಿ ಆಗಿರುವ ಇವರ ಧೋರಣೆಯ ಬಗ್ಗೆ ದೇಶದ ವಿಪಕ್ಷಗಳು ಗಂಭೀರವಾಗಿ ಹೋರಾಟ ಮಾಡುವಂತಾಗಬೇಕು ಮತ್ತು State Funding ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಎಲ್ಲರೂ ಒತ್ತಾಯಿಸಬೇಕು.