ನೋಯ್ಡಾ: ನೋಯ್ಡಾದ ವಸತಿ ಇಲಾಖೆ ಯಡವಟ್ಟು ಮಾಡಿಕೊಂಡಿದ್ದು ವೃದ್ಧನೋರ್ವನನ್ನು ಕಾಯಿಸಿದ್ದಕ್ಕಾಗಿ 16 ಸಿಬ್ಬಂದಿಗೆ ಶಾಲೆಯಲ್ಲಿ ನೀಡುವ ಶಿಕ್ಷೆಯ ಮಾದರಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಕೌಂಟರ್ ಗಳಲ್ಲಿ ದೀರ್ಘಾವಧಿ ಜನರನ್ನು ಕಾಯಿಸುವುದಕ್ಕೆ ಕೋಪಗೊಂಡ ಇಲಾಖೆಯ ಸಿಇಒ ಡಾ. ಲೋಕೇಶ್ ಎಂ 16 ಸಿಬ್ಬಂದಿಗಳಿಗೆ ನಿಂತುಕೊಳ್ಳುವ ಇರುವ ಶಿಕ್ಷೆ ವಿಧಿಸಿದ್ದಾರೆ.
2005 ಬ್ಯಾಚ್ ಐಎಎಸ್ ಅಧಿಕಾರಿ ಕಳೆದ ವರ್ಷ ನೊಯ್ಡಾದಲ್ಲಿ ಅಧಿಕಾರ ಸ್ವೀಕರಿಸಿದ್ದರು. ಆಗಾಗ್ಗೆ ಸಿಸಿಟಿವಿ ಫುಟೇಜ್ ಗಳನ್ನು ಪರಿಶೀಲಿಸುತ್ತಿದ್ದಾಗ ಕೌಂಟರ್ ಗಳ ಬಳಿ ಜನರು ಅತಿ ಹೆಚ್ಚು ಸಮಯ ಕಾಯುತ್ತಿರುವುದನ್ನು ಗಮನಿಸಿದ್ದರು. ಪ್ರಮುಖವಾಗಿ ಹಿರಿಯ ನಾಗರಿಕರು ಕಾಯುವುದನ್ನು ಗಮನಿಸಿದ್ದರು. ಸೋಮವಾರ (ಡಿ.16) ರಂದೂ ಇದೇ ಘಟನೆ ಪುನರಾವರ್ತನೆಯಾಗಿದೆ.
ಸಿಇಒ ಕೌಂಟರ್‌ನಲ್ಲಿ ವೃದ್ಧರೊಬ್ಬರು ಬಹಳ ಹೊತ್ತಿನಿಂದ ಕಾಯುತ್ತಿರುವುದನ್ನು ಗಮನಿಸಿದರು, ತಕ್ಷಣ ಕೌಂಟರ್‌ನಲ್ಲಿದ್ದ ಮಹಿಳಾ ಅಧಿಕಾರಿಗೆ ವಯಸ್ಸಾದ ವ್ಯಕ್ತಿಯನ್ನು ಹೆಚ್ಚು ಹೊತ್ತು ಕಾಯಿಸದೇ, ವಿಚಾರಿಸಿ ಅವರ ಕೆಲಸ ಮಾಡಲಾಗದೇ ಇದ್ದರೆ ಅದನ್ನು ಆ ವ್ಯಕ್ತಿಗೆ ಸ್ಪಷ್ಟವಾಗಿ ಹೇಳುವಂತೆ ಸೂಚನೆ ನೀಡಿದರು. ಈ ಸೂಚನೆ ನೀಡಿದ 20 ನಿಮಿಷದ ಬಳಿಕವೂ ಆ ವೃದ್ಧ ಅದೇ ಕೌಂಟರ್ ಎದುರು ನಿಂತಿದ್ದನ್ನು ಗಮನಿಸಿದ ಅಧಿಕಾರಿ ಕೋಪಗೊಂಡು ಸ್ವತಃ ಕೌಂಟರ್ ಬಳಿಗೆ ಧಾವಿಸಿ ಸಿಬ್ಬಂದಿಗಳಿಗೆ ಕ್ಲಾಸ್ ತೆಗೆದುಕೊಂಡರು. ಅಷ್ಟೇ ಅಲ್ಲದೇ ಸಿಬ್ಬಂದಿಗಳಿಗೆ 20 ನಿಮಿಷಗಳ ಕಾಲ ನಿಂತೇ ಇರುವ ಶಿಕ್ಷೆ ವಿಧಿಸಿದರು. ನಿಂತುಕೊಂಡೇ ಕೆಲಸ ಮಾಡುತ್ತಿರುವ ಈ ಶಿಕ್ಷೆಯ ವಿಡಿಯೋ ವೈರಲ್ ಆಗತೊಡಗಿದೆ.