Top Newsದೇಶ/ವಿದೇಶರಾಜ್ಯಸುದ್ದಿ

ಫೆಬ್ರವರಿ 7 ರಂದು ಓಲಾ-ಉಬರ್ ಬಂಧ್; ಗಿಗ್ ಕಾರ್ಮಿಕರಿಂದ ಪ್ರತಿಭಟನೆ!

ಗಿಗ್ ಕಾರ್ಮಿಕರ ಹಿತರಕ್ಷಣೆ ಮತ್ತು ಕನಿಷ್ಠ ದರ ನಿಗದಿಗೆ ಆಗ್ರಹಿಸಿ ಫೆಬ್ರವರಿ 7 ರಂದು ದೇಶಾದ್ಯಂತ ಓಲಾ, ಉಬರ್ ಮತ್ತು ರಾಪಿಡೋ ಚಾಲಕರು ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಶನಿವಾರದಂದು ಸತತ ಆರು ಗಂಟೆಗಳ ಕಾಲ ಚಾಲಕರು ಅಪ್ಲಿಕೇಶನ್‌ನಿಂದ ಆಫ್‌ಲೈನ್ ಆಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಲಿದ್ದಾರೆ. ಇದರಿಂದಾಗಿ ಅಂದು ಕ್ಯಾಬ್, ಆಟೋ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ಕನಿಷ್ಠ ದರ ನಿಗದಿಗೆ ಆಗ್ರಹಿಸಿ ಕ್ಯಾಬ್ ಚಾಲಕರ ಮುಷ್ಕರ: ಮುಖ್ಯವಾಗಿ 2025 ರ ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳ ಅನ್ವಯ ಕನಿಷ್ಠ ದರ ನಿಗದಿಪಡಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತುತ ಅಪ್ಲಿಕೇಶನ್ ಆಧಾರಿತ ಕಂಪನಿಗಳು ಮನಸೋಯಿಚ್ಛೆ ದರ ನಿಗದಿಪಡಿಸುತ್ತಿದ್ದು, ಇದು ಚಾಲಕರ ಆದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದರೊಂದಿಗೆ ವಾಣಿಜ್ಯ ಬಳಕೆಗಾಗಿ ಖಾಸಗಿ ವಾಹನಗಳ ದುರುಪಯೋಗವನ್ನು ತಡೆಗಟ್ಟಬೇಕು ಹಾಗೂ ಇಂಧನ ಮತ್ತು ನಿರ್ವಹಣಾ ವೆಚ್ಚಗಳ ಏರಿಕೆಗೆ ಅನುಗುಣವಾಗಿ ನ್ಯಾಯಯುತ ಆದಾಯವನ್ನು ಖಾತರಿಪಡಿಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.

2025-26 ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಗಿಗ್ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದ್ದರೂ, ಕೆಲಸಗಾರರ ಆದಾಯ ಮಾತ್ರ ಅತ್ಯಂತ ಅಸ್ಥಿರವಾಗಿದೆ. ದೇಶದ ಶೇಕಡಾ 40 ರಷ್ಟು ಗಿಗ್ ಕೆಲಸಗಾರರು ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದ್ದಾರೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಆಹಾರ ವಿತರಣಾ ವಿಭಾಗದ ಜೊಮಾಟೊ ಮತ್ತು ಸ್ವಿಗ್ಗಿ ಕೆಲಸಗಾರರು ನಡೆಸಿದ ಮಾದರಿಯಲ್ಲೇ ಈಗ ಸಾರಿಗೆ ವಿಭಾಗದ ಕಾರ್ಮಿಕರು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.#GigWorkers #Ola

Comments (0)

Your email address will not be published. Required fields are marked *

Back to top button