ನಗರದಲ್ಲಿ ರಸ್ತೆ ಗುಂಡಿಗಳನ್ನು ನಿರಂತರವಾಗಿ ಮುಚ್ಚಲಾಗುತ್ತಿದ್ದು, ಸರ್ಕಾರಿ ರಜಾ ದಿನಗಳಲ್ಲೂ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಯಲಹಂಕ ವಲಯದ ಸಹಕಾರ ನಗರದ 20ನೇ ಕ್ರಾಸ್ ನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಇಂದಿನಿಂದ 3 ದಿನಗಳ ಕಾಲ ಸರ್ಕಾರಿ ರಜೆಯಿದ್ದು, ರಜಾ ದಿನಗಳಲ್ಲೂ ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಇಂಜಿನಿಯರ್ ಗಳು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ನಗರಲ್ಲಿ ಮಳೆ ಬರುವುದು ನಿಂತಿದ್ದು, ಗುತ್ತಿಗೆದಾರರಿಂದ ಹೆಚ್ಚು ಹಾಟ್ ಮಿಕ್ಸ್ ಪಡೆದು ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುವುದು. ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ತಿಳಿಸಿದರು.
ವಲಯ ಆಯುಕ್ತರಾದ ಕರೀಗೌಡ, ಐ.ಎ.ಎಸ್ ರವರು ಮಾತನಾಡಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ ಬರುವ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳಲ್ಲಿ ಗುಂಡಿಗಳನ್ನು ಗುರುತಿಸಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಪ್ರಸ್ತುತ ವರ್ಷದಲ್ಲಿ 1567 ರಸ್ತೆ ಗುಂಡಿಗಳನ್ನು ಮುಚ್ಚಲಾಗಿರುತ್ತದೆ. ಬಾಕಿಯಿರುವ ಗುಂಡಿಗಳನ್ನು ಶೀಘ್ರ ಮುಚ್ಚಲಾಗುವುದೆಂದು ತಿಳಿಸಿದರು.
865 ಕಿ.ಮೀ ಉದ್ದದ ರಸ್ತೆಗೆ ಡಾಂಬರೀಕರಣ:*
ಯಲಹಂಕ ವಲಯ ವ್ಯಾಪ್ತಿಯಲ್ಲಿ 865 ಕಿ.ಮೀ ಉದ್ದದ 5433 ರಸ್ತೆಗಳನ್ನು ಡಾಂಬರೀಕರಣ ನಡೆಸಲು ಯೋಜನೆ ರೂಪಿಸಿದ್ದು, ಶೀಘ್ರ ಡಾಂಬರೀಕರಣ ಕೆಲಸ ಕೈಗೆತ್ತಿಕೊಳ್ಳಲಾಗುತ್ತದೆ. 110 ಹಳ್ಳಿಗಳ ಪೈಕಿ ಯಲಹಂಕ ವಲಯದಲ್ಲಿ 14 ಹಳ್ಳಿಗಳು ಬರಲಿದ್ದು, 89 ಕಿ.ಮೀ ಉದ್ದದ 499 ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕಿದೆ.
ಯಲಹಂಕ ವಲಯದ ಪ್ರಮುಖ ಅಂಶಗಳು:
* ವಿಧಾನಸಭಾ ಕ್ಷೇತ್ರಗಳ ಸಂಖ್ಯೆ: 02
* ವಾರ್ಡ್ ಗಳ ಸಂಖ್ಯೆ: 14
* ವಾರ್ಡ್ ರಸ್ತೆಗಳ ಸಂಖ್ಯೆ: 9055
* ವಾರ್ಡ್ ರಸ್ತೆಗಳ ಉದ್ದ: 1348.59 ಕಿ.ಮೀ
* ಪ್ರಮುಖ ರಸ್ತೆಗಳ ಸಂಖ್ಯೆ: 24
* ಪ್ರಮುಖ ರಸ್ತೆಗಳ ಉದ್ದ: 97.14 ಕಿ.ಮೀ
* ಯಲಹಂಕ ವಲಯ ವ್ಯಾಪ್ತಿಯ ರಸ್ತೆಗಳ ಒಟ್ಟು ಉದ್ದ: 1444.74 ಕಿ.ಮೀ
ಈ ವೇಳೆ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರರಾದ ರಂಗನಾಥ್, ಕಾರ್ಯಪಾಲಕ ಅಭಿಯಂತರರಾದ ಪ್ರದೀಪ್, ನಾಗಪ್ಪ ಕಮತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.