Freedom TV

ರಾಂಗ್ ರೂಟ್ ಬಂದಿದ್ದಲ್ಲದೆ ರೌಡಿ ವರ್ತನೆ; ಆಟೋ ಚಾಲಕನಿಂದ ಭರ್ಜರಿ ಪಂಚ್!

ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ, ರಸ್ತೆಯಲ್ಲಿ ರೌಡಿ ವರ್ತನೆ ತೋರಿದ ಕಾರು ಚಾಲಕನೊಬ್ಬ ತಾನು ತಪ್ಪು ದಾರಿಯಲ್ಲಿ ಬಂದಿದ್ದರೂ ಸಹ, ಅದನ್ನು ಪ್ರಶ್ನಿಸಿದ ಬೈಕ್ ಸವಾರನ ಮೇಲೆ ಚಾಲಕ ಹಲ್ಲೆ ನಡೆಸಿದ್ದಾನೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ವಿವರದ ಪ್ರಕಾರ, ರಾಂಗ್ ರೂಟ್‌ನಲ್ಲಿ ಬಂದ ಕಾರು ಚಾಲಕ ಎದುರಿಗೆ ಬಂದ ಬೈಕ್ ಸವಾರನಿಗೆ ದಾರಿ ಬಿಡದೆ ಗಲಾಟೆ ಆರಂಭಿಸಿದ್ದಾನೆ. ಬೈಕ್ ಸವಾರ ಈ ತಪ್ಪನ್ನು ಪ್ರಶ್ನಿಸಿದ್ದಕ್ಕೆ ಕೆರಳಿದ ಕಾರು ಚಾಲಕ, ಪೊಲೀಸರ ಮುಂದೆಯೇ ರೌಡಿಯಂತೆ ವರ್ತಿಸಿ ಮಾತಿಗೆ ಮಾತು ಬೆಳೆಸಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ, ಕಾರು ಚಾಲಕ ಬೈಕ್ ಸವಾರನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲು ಮುಂದಾಗಿದ್ದಾನೆ.

ಈ ವೇಳೆ ಜಗಳ ಬಿಡಿಸಲು ಬಂದ ಆಟೋ ಚಾಲಕನ ಮೇಲೆಯೂ ಕಾರು ಚಾಲಕ ದರ್ಪ ತೋರಿಸಿದ್ದಾನೆ. ಆತನ ಉದ್ಧಟತನದ ವರ್ತನೆಯನ್ನು ಕಂಡು ಸಹಿಸಲಾಗದ ಆಟೋ ಚಾಲಕ ಕಾರು ಚಾಲಕನಿಗೆ ಸರಿಯಾಗಿ ಪಂಚ್ ನೀಡಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಇಡೀ ಗದ್ದಲ ಜಿಕೆವಿಕೆ ಆವರಣದ ರಸ್ತೆಯಲ್ಲೇ ನಡೆದಿದ್ದು, ದಾರಿಹೋಕರು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು.

ಸದ್ಯ ವಿದ್ಯಾರಣ್ಯಪುರ ಪೊಲೀಸರು ಈ ಕುರಿತು ಮಾಹಿತಿ ಪಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ ಶಾಂತಿ ಭಂಗ ಉಂಟುಮಾಡಿದ ಮತ್ತು ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ರಸ್ತೆಗಳಲ್ಲಿ ಇಂತಹ ಉದ್ಧಟತನ ತೋರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Comments (0)

Your email address will not be published. Required fields are marked *

Back to top button