ಬೆಂಗಳೂರು: ರಾಜ್ಯದಲ್ಲಿ ಮಸೂದೆಯೊಂದು ಕಾನೂನಾಗಿ ಜಾರಿಯಾಗುವ ಮೊದಲೇ ಅದರ ಅಡಿಯಲ್ಲಿ ಪೊಲೀಸರು ನೋಟಿಸ್ ನೀಡಿರುವುದು ಈಗ ತೀವ್ರ ವಿವಾದಕ್ಕೆ ನಾಂದಿ ಹಾಡಿದೆ. ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಅವರಿಗೆ ಚಿಕ್ಕಮಗಳೂರಿನ ತರಿಕೇರೆ ಪೊಲೀಸರು ನೀಡಿರುವ ನೋಟಿಸ್, ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ.
ಪೊಲೀಸ್ ನೋಟಿಸ್‌ನಲ್ಲಿ ಏನಿದೆ?
ತರಿಕೇರೆ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶೋಭಾಯಾತ್ರೆಗೆ ಸಂಬಂಧಿಸಿದಂತೆ ಪೊಲೀಸರು ವಿಕಾಸ್ ಪುತ್ತೂರು ಅವರಿಗೆ ನೋಟಿಸ್ ನೀಡಿದ್ದಾರೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಅನ್ವಯ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಸಬೇಕು. ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವಂತೆ ಅಥವಾ ಹಿಂಸೆಗೆ ಪ್ರಚೋದನೆ ನೀಡುವಂತೆ ಭಾಷಣ ಮಾಡಬಾರದು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು, ಎಂದು ಉಲ್ಲೇಖಿಸಲಾಗಿದೆ.
ಬಿಜೆಪಿ ಆಕ್ರೋಶ: ‘ಇದು ಪ್ರಜಾಪ್ರಭುತ್ವವೋ ಅಥವಾ ಪೊಲೀಸ್ ರಾಜ್ಯವೋ?’
ಈ ನೋಟಿಸ್ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರ ಅಂಕಿತ ಬೀಳದೆ, ಗೆಜೆಟ್‌ನಲ್ಲಿ ಪ್ರಕಟವಾಗದೆ ಒಂದು ಮಸೂದೆ ಕಾನೂನಾಗುವುದಿಲ್ಲ ಎನ್ನುವ ಕನಿಷ್ಠ ಜ್ಞಾನ ವಕೀಲರೂ ಆಗಿರುವ ಸಿಎಂಗೆ ಇಲ್ಲವೇ?. ರಾಜ್ಯದಲ್ಲಿ ಪೊಲೀಸ್ ಕಚೇರಿಗಳು ಕಾಂಗ್ರೆಸ್ ಕಚೇರಿಗಳಂತೆ ವರ್ತಿಸುತ್ತಿವೆ,” ಎಂದು ಕಿಡಿಕಾರಿದ್ದಾರೆ.
ಹಿಂದೂ ವಿರೋಧಿ ಧೋರಣೆ ಎಂದ ಅಶೋಕ್
ಕೇಸರಿ ಮತ್ತು ಕುಂಕುಮ ಕಂಡರೆ ಕಾಂಗ್ರೆಸ್ ದ್ವೇಷ ಕಾರುತ್ತಿದೆ ಎಂದು ಆರೋಪಿಸಿದ ಅಶೋಕ್, “ಹಿಂದೂಗಳ ಹಬ್ಬ, ಶೋಭಾಯಾತ್ರೆ ಮತ್ತು ಸಮಾಜೋತ್ಸವ ಮಾಡುವುದು ಈ ಸರ್ಕಾರದಲ್ಲಿ ತಪ್ಪಾ? ಇಂತಹ ಹಿಂದೂ ವಿರೋಧಿ ಸರ್ಕಾರವನ್ನು ಕನ್ನಡಿಗರು ಕಿತ್ತೊಗೆಯುವ ದಿನ ದೂರವಿಲ್ಲ,” ಎಂದು ಎಚ್ಚರಿಸಿದ್ದಾರೆ.
ಅಧಿಕೃತವಾಗಿ ಜಾರಿಯೇ ಆಗದ ಕಾಯ್ದೆಯನ್ನು ನೋಟಿಸ್‌ನಲ್ಲಿ ಉಲ್ಲೇಖಿಸಿರುವುದು ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ದೊಡ್ಡ ಪ್ರಮಾದ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.


