ದೇಶ/ವಿದೇಶರಾಜಕೀಯಸುದ್ದಿ

ಬಿಹಾರದಲ್ಲಿ ನಿತೀಶ್ ಯುಗಾಂತ್ಯ; ಮುಂದಿನ ಸಿಎಂ ಯಾರು?

ಬಿಹಾರ: ರಾಜಕಾರಣದಲ್ಲಿ ಒಂದು ಸುದೀರ್ಘ ಅಧ್ಯಾಯ ಅಂತ್ಯಗೊಳ್ಳುವ ಸೂಚನೆ ಸಿಕ್ಕಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ಕಳೆದ ಎರಡು ದಶಕಗಳಿಂದ ಬಿಹಾರದ ಸಾರಥಿಯಾಗಿದ್ದ ನಿತೀಶ್ ಕುಮಾರ್ ಮಾರ್ಚ್ 5, 2026ರಂದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಶೀಘ್ರದಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಸಂಸತ್ತಿನ ಎರಡೂ ಸದನಗಳು ಹಾಗೂ ರಾಜ್ಯದ ಎರಡೂ ಸದನಗಳಲ್ಲಿ ಸೇವೆ ಸಲ್ಲಿಸಬೇಕೆಂಬ ತಮ್ಮ ಹಳೆಯ ಆಸೆಯನ್ನು ಈಡೇರಿಸಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಿತೀಶ್ ಕುಮಾರ್ ನಿರ್ಗಮನದ ಬೆನ್ನಲ್ಲೇ ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಗರಿಗೆದರಿದೆ. ಈ ಬಾರಿ ಭಾರತೀಯ ಜನತಾ ಪಕ್ಷದ ನಾಯಕರೊಬ್ಬರು ಬಿಹಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಆ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಯ ಪೂರ್ಣಾವಧಿ ಮುಖ್ಯಮಂತ್ರಿ ನೇಮಕವಾಗುವ ಸಾಧ್ಯತೆಯಿದೆ. ರೇಸ್‌ನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಅಮಿತ್ ಶಾ ಅವರ ಆಪ್ತ ಹಾಗೂ ಕೇಂದ್ರ ಸಚಿವರಾದ ನಿತ್ಯಾನಂದ್ ರೈ ಅವರದ್ದು. ಇವರು ಯಾದವ ಸಮುದಾಯಕ್ಕೆ ಸೇರಿದವರಾಗಿದ್ದು, ಆರ್‌ಜೆಡಿಯ ವೋಟ್ ಬ್ಯಾಂಕ್ ಸೆಳೆಯಲು ಇವರು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ.

ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಅವರ ಹೆಸರೂ ಸಹ ಮುಂಚೂಣಿಯಲ್ಲಿದೆ. ಕುರ್ಮಿ ಮತ್ತು ಕೋಯರಿ ಸಮುದಾಯದ ಬೆಂಬಲ ಹೊಂದಿರುವ ಇವರು ನಿತೀಶ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇವರ ಜೊತೆಗೆ ದಿಘಾ ಶಾಸಕ ಸಂಜೀವ್ ಚೌರಾಸಿಯಾ ಮತ್ತು ದಲಿತ ಸಮುದಾಯದ ನಾಯಕ ಜನಕ್ ರಾಮ್ ಅವರ ಹೆಸರುಗಳೂ ಸಹ ರೇಸ್‌ನಲ್ಲಿವೆ. ಈ ಮೂಲಕ ಬಿಜೆಪಿ ಸಾಮಾಜಿಕ ಸಮೀಕರಣದ ಲೆಕ್ಕಾಚಾರದಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬಿಹಾರದ ಎರಡನೇ ಮಹಿಳಾ ಮುಖ್ಯಮಂತ್ರಿಯಾಗಿ ಬಿಜೆಪಿಯ ಗಾಯತ್ರಿ ದೇವಿ ಅವರು ಆಯ್ಕೆಯಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಒಂದು ವೇಳೆ ಇದು ನಿಜವಾದಲ್ಲಿ, ರಾಬ್ರಿ ದೇವಿ ಅವರ ನಂತರ ಬಿಹಾರದ ಆಡಳಿತ ಹಿಡಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುತ್ತಿರುವುದು ಸಹ ಜೆಡಿಯು ಭವಿಷ್ಯದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.

Comments (0)

Your email address will not be published. Required fields are marked *

Back to top button