ಹೊಸ ವರ್ಷಾಚರಣೆಗೂ ನಂದಿಬೆಟ್ಟಕ್ಕೂ ಅದೇನೊ ಒಂಥರ ನಂಟು. ಪ್ರಕೃತಿ ಮಡಿಲಲ್ಲಿ ಕುಡಿದು, ಕುಣಿದು, ಕುಪ್ಪಳಿಸಿ ಹೊಸ ವರ್ಷ 2025ನ್ನು ಆಚರಿಸೋಣ ಅಂತ, ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ದಾರೆ. ಆದರೆ, ಈಗಲೇ ನಿಮ್ಮ ಪ್ಲಾನ್ ಅನ್ನು ಬದಲಾಯಿಸಿಕೊಳ್ಳಿ, ಏಕೆಂದರೆ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಅಂದರೆ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ತರಹೆವಾರು ಹೂಗಳ ವಯ್ಯಾರ. ಮಿಗಿಲಾಗಿ ಸಮುದ್ರಮಟ್ಟದಿಂದ 1600 ಮೀಟರ್ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಸ್ತ ವಿಹಂಗಮ ನೋಟ ನೋಡುವುದಕ್ಕೆ ತುಂಬಾ ಫೇಮಸ್.
ನಂದಿಗಿರಿಧಾಮ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2025ನ್ನು ಸ್ವಾಗತಿಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸು ಭಗ್ನ ಮಾಡಿದೆ. ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ.
ಡಿಸೆಂಬರ್ 31ಸಂಜೆ 6 ಗಂಟೆಯಿಂದ 2025 ಜನವರಿ1ರಂದು ಬೆಳಿಗ್ಗೆ ರಾತ್ರಿ 11 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶ ಕೂಡ ನಿರ್ಬಂಧಿಸಿದೆ. ಇದರಿಂದ ಪ್ರವಾಸೋದ್ಯಮ ಇಲಾಖೆಗೂ ನಿರ್ಬಂಧದ ಬಿಸಿ ಮುಟ್ಟಿದೆ.
ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಪಬ್ ರೆಸಾರ್ಟ್ಗಳ ಬದಲು ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷಾಚರಣೆಯ ಕನಸ್ಸು ಕಂಡಿದ್ದ ಯುವ ಸಮುದಾಯ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ.