ಬೆಂಗಳೂರು : 2024ಕ್ಕೆ ಗುಡ್ ಬೈ ಹೇಳಲು ಕೌಂಟ್ ಡೌನ್ ಶುರುವಾಗಿದೆ. ಬೆಂಗಳೂರು ಜನರು 2025 ಹೊಸ ವರ್ಷವನ್ನು ಸ್ವಾಗತಿಸಲು ಕಾತುರರಾಗಿದ್ದಾರೆ. ಇತ್ತ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಹೊಸ ವರ್ಷಾಚರಣೆಯಲ್ಲಿ ಯಾವುದೇ ಅವಘಡ ಸಂಭವಿಸಿದಂತೆ ತಡೆಯಲು ಪ್ಲಾನ್ ನಡೆಸಿದೆ. ಈಗಾಗಲೇ ಜಂಟಿ ಸಭೆ ನಡೆಸಿರುವ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು, ಹೊಸ ವರ್ಷಾಚರಣೆಗೆ ನಿಯಮಗಳನ್ನು ಸಿದ್ದಪಡಿಸಿದ್ದಾರೆ.
ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುವ ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸಂಖ್ಯೆಯನ್ನು ಹೆಚ್ಚಿಸಲು ಪೊಲೀಸ್ ಇಲಾಖೆ ಪಾಲಿಕೆಗೆ ಸೂಚನೆ ನೀಡಿದೆ. ಈ ಹಿಂದೆ ಕೇವಲ 200 ರಿಂದ 300 ಸಿಸಿಟಿವಿ ಕ್ಯಾಮೆರಾಗಳನ್ನು ಮಾತ್ರ ಅಳವಡಿಸಲಾಗಿತ್ತು. ಆದರೆ, ಈ ಬಾರೀ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರುವುದರಿಂದ ಸುಮಾರು 800 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸ್ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದರ ಜೊತೆಗೆ ಇನ್ನೂ ಹಲವು ನಿಯಮಗಳನ್ನು ಜಾರಿ ಮಾಡಲು ತಯಾರಿ ನಡೆದಿದೆ.
ಹೊಸ ವರ್ಷಾಚರಣೆಗೆ ಏನೆಲ್ಲ ನಿಯಮ?
- ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು.
- ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರದಲ್ಲಿ ಆಚರಣೆಗೆ ಅನುಮತಿ.
- ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್ಗಳು ಬಂದ್.
- ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ 800ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ.
- ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್.
- ಆಚರಣೆಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ.
- ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ.
- ಬಾರ್, ಪಬ್ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್ಗೆ ಸೂಚನೆ.
- ನಗರದ ವಿವಿಧ ಭಾಗಗಳಲ್ಲಿ ಆಚರಣೆಗೆ ಅನುಮತಿ ಕಡ್ಡಾಯ.
- ಲೌಡ್ ಸ್ಪೀಕರ್, ಪಟಾಕಿ ಸಿಡಿಸಲು ನಿರ್ಬಂಧ.