ಕಠ್ಮಂಡು: ನೇಪಾಳದ ಕಠ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್ ವೇಳೆ ಸೌರ್ಯ ಏರ್‌ಲೈನ್ಸ್ ವಿಮಾನ 9N-AME (CRJ 200) ಪತನಗೊಂಡಿದ್ದು, ವಿಮಾನದಲ್ಲಿದ್ದ 19 ಮಂದಿ ಪೈಕಿ 18 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 13 ಜನರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಮಾನದ ಪೈಲಟ್ 37 ವರ್ಷದ ಮನೀಶ್ ಶಾಕ್ಯಾ ಅವರನ್ನು ಅವಶೇಷಗಳಿಂದ ರಕ್ಷಿಸಲಾಗಿದ್ದು, ಚಿಕಿತ್ಸೆಗಾಗಿ ಸಿನಮಂಗಲದ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನವು ವಿಮಾನಯಾನ ಸಂಸ್ಥೆಯ ತಾಂತ್ರಿಕ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಟಿಐಎಯ ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ ತಿಳಿಸಿದ್ದಾರೆ.
ವಿಮಾನವು ರನ್‌ವೇಯ ದಕ್ಷಿಣದ ತುದಿಯಿಂದ ಟೇಕಾಫ್ ಆಗುತ್ತಿದ್ದಾಗ, ರೆಕ್ಕೆಯ ತುದಿಯು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಇದ್ದಕ್ಕಿದ್ದಂತೆ ಪಲ್ಟಿಯಾಯಿತು. ತಕ್ಷಣವೇ ಬೆಂಕಿ ಹೊತ್ತಿಕೊಂಡ ವಿಮಾನವು ನಂತರ ರನ್‌ವೇಯ ಪೂರ್ವ ಭಾಗದಲ್ಲಿರುವ ಕಮರಿಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ವಿಮಾನಯಾನ ಸಂಸ್ಥೆಯನ್ನು 2019 ರಲ್ಲಿ ಭಾರತದ ಕುಬೇರ್ ಗ್ರೂಪ್ 630 ಮಿಲಿಯನ್ ನೇಪಾಳಿ ರೂಪಾಯಿಗಳಿಗೆ ಸ್ವಾಧೀನಪಡಿಸಿಕೊಂಡಿತು. 2021 ರಲ್ಲಿ ಕುಬೇರ್ ಏರ್‌ಲೈನ್ಸ್ ಎಂದು ಮರು ನಾಮಕರಣ ಮಾಡಲಾಯಿತು. ಕಠ್ಮಂಡು ವಿಮಾನ ನಿಲ್ದಾಣವು ಸೌರ್ಯ ಏರ್‌ಲೈನ್ಸ್‌ನ ಎಲ್ಲಾ ವಿಮಾನಗಳನ್ನು ಡಿಸೆಂಬರ್ 6, 2018 ರಂದು ಸ್ಥಗಿತಗೊಳಿಸಿತು. ವಿಮಾನ ನಿಲ್ದಾಣಕ್ಕೆ ನೀಡಬೇಕಾದ 355,000 ಡಾಲರ್ ಸಾಲದ ಒಂದು ಭಾಗವನ್ನು ಪಾವತಿಸಿದ ನಂತರ ಮಾರ್ಚ್ 8, 2019 ರಂದು ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.