ಕಠ್ಮಂಡು: ನೇಪಾಳದಲ್ಲಿ ಸರ್ಕಾರ ಸಾಮಾಜಿಕ ಜಾಲತಾಣಗಳ ನಿಷೇಧಿಸಿರುವುದನ್ನು ವಿರೋಧಿಸಿ ಜನರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದು, ಜನಾಕ್ರೋಶಕ್ಕೆ ಬೆಚ್ಚಿದ ನೇಪಾಳ ಸರ್ಕಾರ ಸೋಷಿಯಲ್ ಮೀಡಿಯಾ ಬ್ಯಾನ್ ಆದೇಶ ವಾಪಸ್ ಪಡೆದಿದೆ.
ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ಅಲ್ಲಿನ ಸರ್ಕಾರ ಹೇರಿದ ನಿರ್ಬಂಧವನ್ನು ಹಿಂದಕ್ಕೆ ಪಡೆದಿದೆ. ನಿಷೇಧವನ್ನು ಹಿಂಪಡೆಯುವಂತೆ ಭಾರೀ ಪ್ರತಭಟನೆ ನಡೆದ ಬೆನ್ನಲ್ಲೇ ಸರ್ಕಾರ ಈ ಘೋಷಣೆ ಮಾಡಿದೆ.
ಸಚಿವ ಸಂಪುಟದ ತುರ್ತು ಸಭೆ ಕರೆದು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಾಸ್ ಪಡೆಯಲಾಗಿದೆ. ಇನ್ನು ಮುಂದೆ ಎಂದಿನಂತೆ ಸೋಷಿಯಲ್ ಮೀಡಿಯಾ ಕಾರ್ಯನಿರ್ವಹಿಸುತ್ತದೆ.ಅಲ್ಲದೇ ಈ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ನೇಪಾಳದ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದ ವಿರುದ್ಧ ಅಲ್ಲಿನ ಜನರು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರತಿಭಟನಾಕಾರರ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ನೇಪಾಳ ಸರ್ಕಾರ ಈ ನಿಷೇಧವನ್ನು ವಾಪಾಸ್ ಪಡೆದಿದೆ.