
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂತರರಾಜ್ಯ ಮಟ್ಟದ ಬೃಹತ್ ಡ್ರಗ್ ತಯಾರಿಕಾ ಜಾಲವನ್ನು ಭೇದಿಸಿದ್ದಾರೆ. ರಹಸ್ಯವಾಗಿ ನಡೆಯುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನಲ್ಲಿ ಈ ರೀತಿ ಡ್ರಗ್ ತಯಾರಿಕಾ ಘಟಕ ಪತ್ತೆಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಪ್ರಕರಣಗಳು ವರದಿಯಾಗಿದ್ದು, ಈಗ ಮತ್ತೊಮ್ಮೆ ಅಂತರರಾಜ್ಯ ಸಿಂಡಿಕೇಟ್ ಪತ್ತೆಯಾಗಿರುವುದು ನಗರವು ಮಾದಕವಸ್ತುಗಳ ಅಕ್ರಮ ಜಾಲದ ಕೇಂದ್ರವಾಗುತ್ತಿದೆಯೇ ಎಂಬ ಆತಂಕವನ್ನು ಮೂಡಿಸಿದೆ. ವಿಶೇಷವೆಂದರೆ, ಮೈಸೂರು ಪೊಲೀಸರಿಗೆ ತಿಳಿಯದಂತೆ ಬೆಳೆದಿದ್ದ ಈ ಜಾಲವನ್ನು ಹೊರರಾಜ್ಯದ ಅಧಿಕಾರಿಗಳು ಪತ್ತೆಹಚ್ಚಿರುವುದು ಸ್ಥಳೀಯ ಪೊಲೀಸರ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ.
ಈ ಪ್ರಕರಣದ ಮಾಸ್ಟರ್ ಮೈಂಡ್ ಸೇರಿದಂತೆ ಬಂಧಿತರಾದ ನಾಲ್ವರು ಆರೋಪಿಗಳು ರಾಜಸ್ಥಾನದ ಜಲೋರ್ ಜಿಲ್ಲೆಯ ಮೂಲದವರಾಗಿದ್ದಾರೆ. ಅತ್ಯಾಧುನಿಕ ಮಾದಕವಸ್ತು ತಯಾರಿಕಾ ಲ್ಯಾಬ್ ಸ್ಥಾಪಿಸಲು ಸಂಚು ರೂಪಿಸಿದ್ದ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಎನ್‌ಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳು ಮಾತ್ರವಲ್ಲದೆ, 25.6 ಲಕ್ಷ ರೂಪಾಯಿ ನಗದು, ಒಂದು ಕಾರು ಮತ್ತು ಮಾದಕವಸ್ತು ತಯಾರಿಕೆಗೆ ಬಳಸಲಾಗುತ್ತಿದ್ದ ಸುಮಾರು 500 ಕಿಲೋಗ್ರಾಂ ತೂಕದ ವಿವಿಧ ರಾಸಾಯನಿಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.



