Top Newsಮನರಂಜನೆವೈರಲ್ ನ್ಯೂಸ್ಸುದ್ದಿ

ಮಿತಿಮೀರಿದ ರೀಲ್ಸ್ ಹುಚ್ಚು! DSLR ಕ್ಯಾಮರಾ ಖರೀದಿಸಲು ಕಳ್ಳತನಕ್ಕಿಳಿದ ಮನೆಕೆಲಸದಾಕೆ!

ನವದೆಹಲಿ:  ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾ ಕ್ರೇಜ್​ ಊಹಿಸಲೂ ಸಾಧ್ಯವಾಗದಷ್ಟು ಹೆಚ್ಚಾಗಿದೆ. ರೀಲ್ಸ್​ ಮೂಲಕ ವೈರಲ್​ ಆಗಲು, ಫೇಮಸ್​ ಆಗಲು ಬಹುತೇಕರು ಬಯಸುತ್ತಾರೆ. ಒಂದಷ್ಟು ನಿಯಮಗಳನ್ನು ಪೂರೈಸಿದರೆ ಫೇಸ್​ಬುಕ್​, ಯೂಟ್ಯೂಬ್​ ರೀಲ್ಸ್​ಗಾಗಿ ಹಣವನ್ನೂ ನೀಡುತ್ತೆ. ಹೀಗಾಗಿ ಅನೇಕರು ರೀಲ್ಸ್​ ಹುಚ್ಚಿಗೆ ಬಿದ್ದಿದ್ದಾರೆ. ಇಲ್ಲೊಬ್ಬ ಮನೆಕೆಲಸದಾಕೆ ಕೂಡ ರೀಲ್ಸ್​ ಮಾಡಿ ವೈರಲ್​ ಆಗಲು ಬಯಸಿದ್ದಳು. ಅದರಲ್ಲಿ ಏನೂ ತಪ್ಪಿಲ್ಲ. ಆದರೆ ಆಕೆ ರೀಲ್ಸ್​ ಮಾಡಲು ದುಬಾರಿ ಕ್ಯಾಮರಾ ಖರೀದಿಗೆ ಮುಂದಾಗಿದ್ದಳು. ಇದಕ್ಕಾಗಿ ಹಣ ಹೊಂದಿಸಲು ಕಳ್ಳತನಕ್ಕಿಳಿದು ಈಗ ಸಿಕ್ಕ ಬಿದ್ದಿದ್ದಾಳೆ.

ಏನಿದು ಘಟನೆ?

ದೆಹಲಿಯ ದ್ವಾರಕಾದಲ್ಲಿ ಮನೆಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆಯೊಬ್ಬರು ರೀಲ್ಸ್​ ಮಾಡಲು ಡಿಎಸ್‌ಎಲ್‌ಆರ್ ಕ್ಯಾಮೆರಾ ಖರೀದಿಸಲು ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾಳೆ. ಇದಕ್ಕಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸ್‌ನ ಮಹಿಳೆಯನ್ನು ಬಂಧಿಸಿದ್ದು, ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕ್ಯಾಮರಾಗಾಗಿ ಕಳ್ಳತನ

ನೀತು ಯಾದವ್ ಎಂದು ಗುರುತಿಸಲಾದ ಮಹಿಳೆ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ವೀಡಿಯೊಗಳನ್ನು ಚಿತ್ರಿಸಲು ನಿಕಾನ್ ಡಿಎಸ್‌ಎಲ್‌ಆರ್ ಕ್ಯಾಮೆರಾವನ್ನು ಖರೀದಿಸಲು ಬಯಸಿದ್ದಳು. ಇದಕ್ಕಾಗಿ ಆಕೆ ಕಳ್ಳತನಕ್ಕೆ ಇಳಿದಿದ್ದಳು. ದ್ವಾರಕಾದ ಐಷಾರಾಮಿ ಪ್ರದೇಶದಲ್ಲಿರುವ ಬಂಗಲೆಯ ಮಾಲೀಕರು ಜುಲೈ 15 ರಂದು ತಮ್ಮ ಮನೆಗೆ ಕಳ್ಳತನವಾಗಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದಾರೆ. ಅವರ ಮನೆಯಲ್ಲಿ ಚಿನ್ನದ ಬಳೆ, ಬೆಳ್ಳಿ ಸರ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಕಳ್ಳತನಕ್ಕೆ ಕೆಲವು ದಿನಗಳ ಮೊದಲು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಕೆಲಸದಾಕೆಯೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ತಲೆಮರೆಸಿಕೊಂಡಿದ್ದ ನೀತು

ಪೊಲೀಸರು ನೀತು ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿದ್ದು, ಆಕೆಯ ವಿಳಾಸವೂ ನಕಲಿ ಎಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಶೋಧಿಸಿ ಸ್ಥಳೀಯರೊಂದಿಗೆ ಮಾತನಾಡಿ, ನೀತು ವಿಳಾಸವನ್ನು ಪಡೆಯಲಾಯಿತು. ದೆಹಲಿಯಿಂದ ಬ್ಯಾಗ್ ಸಮೇತ ಪರಾರಿಯಾಗಲು ಯತ್ನಿಸುತ್ತಿದ್ದಾಗ ಆಕೆಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನು ರಾಜಸ್ಥಾನದ ನಿವಾಸಿಯಾಗಿದ್ದು, ತನ್ನ ಪತಿ ಮಾದಕ ವ್ಯಸನಿ ಎಂದು ಹೇಳಿದ್ದಾಳೆ.

DSLR ಕ್ಯಾಮರಾನೇ ಬೇಕು!

ಕೆಲ ದಿನಗಳಿಂದ ಆಕೆ ಯೂಟ್ಯೂಬ್ ಚಾನೆಲ್ ತೆರೆದಿದ್ದಳು, ಜೊತೆಗೆ ಇನ್​ಸ್ಟಾಗ್ರಾಮ್ ರೀಲ್ಸ್​​ಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದಳು. ವಿಡಿಯೋಗಳನ್ನು ಶೂಟ್​ ಮಾಡಲು DSLR ಕ್ಯಾಮರಾವನ್ನು ಪಡೆದುಕೊಳ್ಳುವಂತೆ ಯಾರೋ ಆಕೆಗೆ ಸಲಹೆ ನೀಡಿದರು. ಕ್ಯಾಮರಾಕ್ಕೆ ಲಕ್ಷಗಟ್ಟಲೆ ಬೇಕು ಎಂದು ತಿಳಿದ ಆಕೆ ಸಂಬಂಧಿಕರಲ್ಲಿ ಸಾಲ ಕೇಳಿದರೂ ಯಾರೂ ಹಣ ಕೊಟ್ಟಿಲ್ಲ. ದ್ವಾರಕಾ ಬಂಗಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದಿಯಲು ಯೋಜನೆ ರೂಪಿಸಿದ್ದಳು ಎಂದು ಆಕೆಯೇ ಬಾಯ್ಬಿಟ್ಟಿದ್ದಾಳೆ.

Comments (0)

Your email address will not be published. Required fields are marked *

Back to top button