ನವದೆಹಲಿ: ಮಂಗಳವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ರೂಪಿಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದು, ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧವೂ ಹರಿಹಾಯ್ದಿದ್ದಾರೆ.
ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಲೋಕಸಭೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಹಾಗೂ ರಾಜ್ಯಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ದೇಶದ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಸದನದ ಕಲಾಪ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು.
ಇಂದು ಮೊದಲ ಸೋಮವಾರ, ಈ ಪವಿತ್ರ ದಿನದಂದು ಮಹತ್ವದ ಅಧಿವೇಶನ ಪ್ರಾರಂಭವಾಗುತ್ತಿದೆ. ಶ್ರಾವಣದ ಮೊದಲ ಸೋಮವಾರದಂದು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗುತ್ತಿದ್ದು, ಇಡೀ ದೇಶವು ಕಾತುರದಿಂದ ಎದುರು ನೋಡುತ್ತಿದೆ. 60 ವರ್ಷಗಳ ನಂತರ ಮೂರನೇ ಬಾರಿಗೆ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಮತ್ತು ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ನಾಳೆ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ರೂಪಿಸಲಿದೆ. ದೇಶದ ಜನರಿಗೆ ಭರವಸೆಗಳನ್ನು ನೀಡುತ್ತಿದ್ದೇನೆ ಮತ್ತು ಇದನ್ನು ನಾನು ಜಾರಿಗೆ ತರುತ್ತೇನೆ. ಇದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಈ ಬಜೆಟ್ ಅಮೃತ ಕಾಲಕ್ಕೆ ಮಹತ್ವದ ಬಜೆಟ್ ಆಗಿದೆ. ಇಂದಿನ ಬಜೆಟ್ ನಮ್ಮ ಅಧಿಕಾರದ ಮುಂದಿನ 5 ವರ್ಷಗಳ ದಿಕ್ಕನ್ನು ನಿರ್ಧರಿಸುತ್ತದೆ. ಈ ಬಜೆಟ್ ನಮ್ಮ ವಿಕಸಿತ ಭಾರತದ ಕನಸಿಗೆ ಬುನಾದಿಯಾಗಿದೆ ಎಂದು ತಿಳಿಸಿದರು.