ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 15ನೇ ಬಜೆಟ್ ನಲ್ಲಿ ಒಂದು ಕಾರ್ಯಯೋಜನೆ ಪ್ರಕಟ ಮಾಡಿಲ್ಲ, ಒಬ್ಬ ರಾಜ್ಯದ ಮುಖ್ಯಮಂತ್ರಿ ಮತ್ತು ಅರ್ಥ ಸಚಿವನಾಗಿ ಇಡೀ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದಿರುವುದರಿಂದ ಇದೊಂದು ನಾಗರೀಕ ಬಜೆಟ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿದರು.
ಅವರು ಧ್ವನಿ ಮುದ್ರಣದ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಿಎಂ ದೂರ ದೃಷ್ಟಿ ಇಲ್ಲದೆ ಬಜೆಟ್ ನ್ನು ಮಂಡನೆ ಮಾಡಿದ್ದಾರೆ. ನಿರ್ದಿಷ್ಟ ಯೋಜನೆಗೆ ನಿರ್ದಿಷ್ಟ ಅನುದಾನವನ್ನು ಮಂಜೂರು ಮಾಡಿಲ್ಲ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಪರಿಶಿಷ್ಟ ಪಂಗಡದವರಿಗೆ ಕೌಶಲ್ಯ ತರಬೇತಿ ನೀಡಲು ಕೆಲವೊಂದಷ್ಟು ಹಣ ಮೀಸಲಿಟ್ಟು, ಪರಿಶಿಷ್ಟ ಜಾತಿಯವರನ್ನು ಕೈಬಿಟ್ಟಿರುವುದು ಏಕೆಂದು ಅರ್ಥವಾಗುತ್ತಿಲ್ಲ, ರಾಜ್ಯದ ದಲಿತರಿಗೆ ವಿಶೇಷವಾದ ಸಮಾನತೆಯನ್ನು ಕೊಡುವ ಜವಾಬ್ದಾರಿ ಮುಖ್ಯಮಂತ್ರಿಗಳದ್ದಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದಿರುವುದನ್ನು ಪ್ರಸ್ತಾಪ ಮಾಡುತ್ತಾರೆಯೇ ವಿನಃ ಈ ಯೋಜನೆಗೆ ಒಂದು ಪೈಸೆಯನ್ನು ನಿಗದಿಪಡಿಸದೆ ಇರುವುದು ಜಿಲ್ಲೆಗೆ ಮಾಡಿರುವ ಅಪಮಾನ. ಮೆಡಿಕಲ್ ಕಾಲೇಜಿನ ಹಿಂದಿನ ಆದೇಶಗಳನ್ನು ಬಜೆಟ್ ನಲ್ಲಿ ಬರೆಯುವುದಕ್ಕೆ ಮಾತ್ರ ಸೀಮಿತವಾಗಿದೆ.
ಹಿಂದಿನ ಸರ್ಕಾರದ ಆಡಳಿತದಲ್ಲಿ ನಡೆದ ಆದೇಶಗಳನ್ನು ಬಜೆಟ್ ನಲ್ಲಿ ನಮೂದು ಮಾಡದೇ ಇರುವುದು ಇದನ್ನು ಬಜೆಟ್ ಎಂದು ಕರೆಯುವುದಿಲ್ಲ. ಮುಖ್ಯಮಂತ್ರಿಗಳ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಹಣ ಬಿಡುಗಡೆಯಲ್ಲಿ ಎಸ್ಕ್ರೋ ಖಾತೆ ತೆರೆಯಬೇಕು ಎಂದು ಹೇಳಿದ್ದು, ಅದನ್ನು ತೆರೆದರೆ, ನಾನು ದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ಜೊತೆ ಮಾತಾಡಿ , ಹಣ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನ ವಿರೋಧಿ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಬಾರದಿತ್ತು ಎಂದು ಹೇಳಿದರು.