ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆತಿದೆ. ನಾಗರಹೊಳೆ ಹೆಬ್ಬಾಗಿಲು ವೀರನ ಹೊಸಹಳ್ಳಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡದ ಆನೆಗಳಿಗೆ ಪೂಜೆ ಸಲ್ಲಿಸಿ ಸಾಂಸ್ಕೃತಿಕ ನಗರಿಗೆ ಬೀಳ್ಕೊಡಲಾಗಿದೆ. ಈ ಮೂಲಕ ಅರಮನೆ ನಗರಿಯಲ್ಲಿ ದಸರಾ ವೈಭವ ಆರಂಭವಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಶುಭ ತುಲಾ ಲಗ್ನದಲ್ಲಿ ದಸರಾ ಗಜಪಡೆಯ ಮೊದಲ ಹಂತದ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು.
ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳನ್ನು ಕಾಡಿನಿಂದ ನಾಡಿಗೆ ಕಳುಹಿಸಲಾಯ್ತು. ಈ ಬಾರಿ ದಸರೆಯಲ್ಲಿ ಒಟ್ಟು 14 ಆನೆಗಳು ಪಾಲ್ಗೊಳ್ಳಲಿವೆ. ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು (58), ಭೀಮ (24), ಗೋಪಿ (41), ಧನಂಜಯ (43), ಕಂಜನ್ (25), ರೋಹಿತ್ (22), ಲಕ್ಷ್ಮಿ (53), ವರಲಕ್ಷ್ಮಿ (67), ಏಕಲವ್ಯ (38) ಆನೆಗಳು ನಗರದತ್ತ ಮುಖಮಾಡಿವೆ. ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಲಿದ್ದು, ಹೆಚ್ಚುವರಿಯಾಗಿ 4 ಮೀಸಲು ಆನೆಗಳು ಗುರುತು ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ದಸರಾ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಕಳೆದ ಬಾರಿಯೂ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ. ಈ ಬಾರಿಯೂ ಕೂಡ ಅಂಬಾರಿಯನ್ನ ಅಭಿಮನ್ಯು ಹೊರಲಿದ್ದಾನೆ. ನಮ್ಮೆಲ್ಲರ ನೆಚ್ಚಿನ ಅರ್ಜುನ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು. ಅರ್ಜುನ ಮೃತಪಟ್ಟ ಜಾಗದಲ್ಲೇ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ಇದರ ಜೊತೆಗೆ ಬಳ್ಳೆ ಆನೆ ಶಿಬಿರದಲ್ಲೂ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಮೂಲಕ ಕಾಡಾನೆ ದಾಳಿಗೆ ಮೃತಪಟ್ಟ ಅರ್ಜುನ ಆನೆಯ ಸ್ಮರಿಸುವ ಕೆಲಸ ಆಲಿದೆ ಎಂದರು.
ಮೈಸೂರಿನ ಅಶೋಕಪುರಂ ಅರಣ್ಯ ಭವನಕ್ಕೆ ಆನೆಗಳು ಲಾರಿಗಳ ಮೂಲಕ ತಲುಪಿದವು. ಆನೆಗಳಿಗೆ ಹಿರಿಯ ಅರಣ್ಯಾಧಿಕಾರಿಗಳು ಸ್ವಾಗತ ಕೋರಿದರು. ನಾಳೆಯೂ ಆನೆಗಳು ಅರಣ್ಯಭವನದಲ್ಲೇ ವಾಸ್ತವ್ಯ ಇರಲಿದ್ದು, ನಾಡಿದ್ದು ಮೈಸೂರು ಅರಮನೆ ಆವರಣ ಪ್ರವೇಶಿಸಲಿವೆ. ದಸರಾ ಗಜಪಡೆ ಮೈಸೂರಿಗೆ ಎಂಟ್ರಿ ಕೊಟ್ಟಿದ್ದು ಇನ್ನುಮುಂದೆ ಸಾಂಸ್ಕೃತಿಕ ನಗರಿಯ ರಾಜಬೀದಿಗಳಲ್ಲಿ ಗಜಪಡೆಯ ಕಲರವ ಜೋರಾಗಿರಲಿದೆ.


