ಮೈಸೂರು : ಅಕ್ರಮವಾಗಿ ತಂತಿ ಬೇಲಿಗೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮರಳುಕಟ್ಟೆಯಲ್ಲಿ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ ತಂತಿ ಬೇಲಿ ಸಂಪರ್ಕಕ್ಕೆ ಬಂದ 30 ವರ್ಷದ ಕಾಡಾನೆಯೊಂದು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ.
ಕುಗ್ರಾಮದ ಬುಡಕಟ್ಟು ನಿವಾಸಿ ಮಣಿ ಎಂಬುವವರ ಒಡೆತನದ ಸರ್ವೆ ನಂಬರ್ 2ರ ಜಮೀನಿನಲ್ಲಿ ಆನೆ ವಿದ್ಯುತ್ ಸ್ಪರ್ಶಿಸಿದೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಆನೆ ಶವವಾಗಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಚಿಟ್ಟಿಯಪ್ಪ, ವಿದ್ಯುತ್ ಸ್ಪರ್ಶದಿಂದ ಸಾವು ಸಂಭವಿಸಿದೆ ಎಂದು ಖಚಿತಪಡಿಸಿದ್ದಾರೆ. ಹೀಗಾಗಿ ಮಣಿ ವಿರುದ್ಧ ಅರಣ್ಯ ಇಲಾಖೆ ಪೊಲೀಸರಿಗೆ ದೂರು ನೀಡಿದ್ದಾರೆ.


