ಮೈಸೂರು : ಬೆಂಗಳೂರಿನಲ್ಲಿ ಇತ್ತೀಚೆಗೆ ಮೂರು ಹಸುಗಳ ಕೆಚ್ಚಲು ಕತ್ತರಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ಶಾರದಾದೇವಿ ನಗರದಲ್ಲಿರುವ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವರ ನಿವಾಸದ ಬಳಿ ಜಮಾಯಿಸಿ ಸಚಿವ ವೆಂಕಟೇಶ್ ವಿರುದ್ಧ ಘೋಷಣೆಗಳನ್ನು ಕೂಗಿ ಕಪ್ಪು ಸಂಕ್ರಾಂತಿ ಆಚರಿಸತ್ತಿರುವುದಾಗಿ ಹೇಳಿದರು.
ಹಸುವಿನ ಕೆಚ್ಚಲು ಕೊಯ್ದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ಅವರು, ಚೀಲದಲ್ಲಿ ಸಗಣಿ ತುಂಬಿಕೊಂಡು ಉದ್ಯಾನವನದ ಮುಂಭಾಗವಿರುವ ಸಚಿವರ ಮನೆಯ ಕಡೆಗೆ ಧಾವಿಸಿದರು. ಈ ವೇಳೆ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದ ಪೊಲೀಸರು, ಪ್ರತಿಭಟನಾಕಾರರನ್ನು ರಸ್ತೆಯಲ್ಲೇ ತಡೆದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು.
ಈ ವೇಳೆ ರಸ್ತೆಯಲ್ಲೇ ತಾವು ತಂದಿದ್ದ ಸಗಣಿ ಸುರಿದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಗರು, ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಂಧಿಸಿ, ಪೊಲೀಸ್ ವಾಹನಗಳಲ್ಲಿ ಸಿಎಆರ್ ಮೈದಾನಕ್ಕೆ ಕರೆದೊಯ್ದರು. ನಂತರ ಬಿಡುಗಡೆಗೊಳಿಸಿದರು.