ನೆಲಮಂಗಲ: ಕೆಲ ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಪತಿ ಕ್ಷುಲ್ಲಕ ವಿಚಾರದಲ್ಲಿ ಪತ್ನಿಯನ್ನ ಕೊಲೆ ಮಾಡಿ ಮನೆಯಲ್ಲೇ ಪೆಟ್ರೋಲ್ ಸುರಿದು ಸುಟ್ಟಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಎರಡು ಮೂರು ದಿನಗಳ ಹಿಂದೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವ್ಯ (27) ಮೃತ ಗೃಹಿಣಿ. ಈಕೆಯ ಶವ ಮನೆಯ ಬಾತ್‌ರೂಂನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತಿ ವಿಪರೀತವಾಗಿ ಮದ್ಯಪಾನ ಮಾಡುತ್ತಿದ್ದ. ಇದರಿಂದ ಇಬ್ಬರ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿದೆ. ಕುಡಿದ ಅಮಲಿನಲ್ಲಿ ಮನೆಯ ಬಾತ್ ರೂಮ್‌ನಲ್ಲಿ ಪತ್ನಿಯನ್ನು ಕೊಲೆ ಮಾಡಿ ನಂತರ ಪೆಟ್ರೋಲ್ ಸುರಿದು ಸುಟ್ಟಿರುವ ಆರೋಪಿ ಪತಿಯನ್ನು ದಾಬಸ್ ಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಕಾವ್ಯ ಫೋನ್ ತೆಗೆಯದ ಹಿನ್ನೆಲೆ ಮನೆಯವರು ಬಂದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ದಾಬಸ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.