MUDA, ವಾಲ್ಮೀಕಿ ಹಗರಣಗಳ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ಸಿಎಂ ಸಿದ್ಧರಾಮಯ್ಯ ಈಗ ಯೂಟರ್ನ್ ಹೊಡೆದರಾ?
ಶನಿವಾರ ಚಾಮರಾಜ ನಗರದಲ್ಲಿ ನಡೆದ ಬಿ.ರಾಚಯ್ಯ ಭವನ ಉದ್ಘಾಟನೆಯ ನಂತರ ಅವರಾಡಿದ ಮಾತು ಗಮನಿಸಿದರೆ ಮುಖ್ಯಮಂತ್ರಿ ಸಿದ್ಧರಾಮಯ್ಯಪರಿಶಿಷ್ಟರ ಕಾರ್ಡ್ ಪ್ರಯೋಗಿಸುತ್ತಿದ್ದಾರೆ ಎನಿಸುತ್ತದೆ.
ತಮ್ಮ ರಾಜಕೀಯ ಜೀವನದಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರೇ ನನ್ನ ನಾಯಕರು ಮತ್ತು ಮಾರ್ಗದರ್ಶಕರು. ಹಿಂದುಳಿದ ವರ್ಗದ ಮುಖ್ಯಮಂತ್ರಿಗಳ ಪೈಕಿ ಅರಸು ಅವರನ್ನು ಬಿಟ್ಟರೆ ನಾನೇ ಐದು ವರ್ಷ ಪೂರ್ತಿ ಆಡಳಿತ ನಡೆಸಿದವನು ಎನ್ನುತ್ತಿದ್ದರು. ಶುಕ್ರವಾರ ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲೂ ಅವರು ಅರಸು ಅವರ ಹೆಸರು ಬಳಸಿ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದರು.
ಜನಾಂದೋಲನ ಸಮಾವೇಶ ಮುಗಿದು ಒಂದು ದಿವಸ ಕಳೆದಿಲ್ಲ. ಅಂದರೆ ಇವತ್ತು ಶನಿವಾರ ಚಾಮರಾಜನಗರದಲ್ಲಿ ಸಿದ್ದು ತಾನು ಮಾಜಿ ಸಚಿವ, ಆ ಕಾಲದ ಪ್ರಭಾವಿ ದಲಿತ ನಾಯಕರಾಗಿದ್ದ ರಾಚಯ್ಯನವರ ಪ್ರಾಡಕ್ಟ್ ಎಂದಿದ್ದಾರೆ. ದಿವಂಗತ ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ ಸಂಸ್ಮರಣಾ ದಿನದಲ್ಲಿ ಸಿದ್ದು ಈ ಮಾತಾಡಿದ್ದಾರೆ. ಇದುವರೆಗಿನ ತಮ್ಮ ಮಾತುಗಳಿಗೆ ಸಿದ್ದು ಯೂಟರ್ನ್ ಹೊಡೆದಿದ್ದಾರೆ.
ಅಂದರೆ ಚಾಮರಾಜ ನಗರದಲ್ಲಿ ತಾನು ಬಿ.ರಾಚಯ್ಯನವರ ಪ್ರಾಡಕ್ಟ್ ಎಂದು ಹೇಳುವ ಮೂಲಕ ಅಲ್ಲಿ ಹೆಚ್ಚಿರುವ ಪರಿಶಿಷ್ಟ ಜನಾಂಗದವರ ಅನುಕಂಪ ಗಳಿಸಲು ಮುಖ್ಯಮಂತ್ರಿಗಳು ಯತ್ನಿಸುತ್ತಿದ್ದಾರೆ ಎಂಬ ವಿಶ್ಲೇಷಣೆ ಶುರುವಾಗಿದೆ.
ಕಾಂಗ್ರೆಸ್ ಸಿಎಂ ಬದಲಾವಣೆಯ ಕೂಗೆದ್ದಿದೆ. ಮತ್ತೊಂದೆಡೆ ದಲಿತ ಸಿಎಂ ಅಸ್ತ್ರ ಪ್ರಯೋಗವಾಗಿದೆ. ಇಂಥಾ ಹೊತ್ತಲ್ಲಿ ಸಿದ್ದರಾಮಯ್ಯ ತಾನು ರಾಚಯ್ಯ ಪ್ರಾಡಕ್ಟ್ ಎನ್ನುವ ಮೂಲಕ ಎಸ್ಸಿ, ಎಸ್ಟಿ ಪ್ರತಿನಿಧಿ ತಾನೇ ಎಂಬ ಸಂದೇಶ ರವಾನೆಗೆ ಮುಂದಾಗಿದ್ದಾರಾ ಎಂಬ ಪ್ರಶ್ನೆ ಶುರುವಾಗಿದೆ.