ಬೆಂಗಳೂರು: ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ನಿರಾಧಾರಾವಾಗಿದ್ದು ನನಗೆ ನೀವು ನೋಟಿಸ್ ಕೊಟ್ಟಿರುವುದು ಕ್ರಮಬದ್ದವಲ್ಲ ಎಂದು ಸಿಎಂ ಸಿದ್ದರಾಮಯ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ಮುಡಾ ಸೈಟ್ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಭಾನುವಾರವೇ ಸಿಎಂ 60 ಪುಟಗಳ ಸುದೀರ್ಘ ಪತ್ರ ಬರೆದು ಕೊಟ್ಟಿದ್ದಾರೆ. ಮುಡಾ ನಿವೇಶನದ ಸಂಪೂರ್ಣ ದಾಖಲಾತಿಗಳು, ಸುಪ್ರೀಂಕೋರ್ಟ್, ಹೈಕೋರ್ಟ್‌ನ ಹಲವು ತೀರ್ಪುಗಳ ಉಲ್ಲೇಖ ಇರುವ ದಾಖಲಾತಿಗಳು ರವಾನಿಸಿ ಅಧಿಕಾರ ದುರ್ಬಳಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ನೀಡಿದ ಉತ್ತರದಲ್ಲಿ ಏನಿದೆ?
ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲವೂ ನಿರಾಧಾರವಾಗಿದ್ದು ನನಗೆ ನೀವು ನೋಟಿಸ್ ಕೊಟ್ಟಿರುವುದು ಕ್ರಮಬದ್ದವಲ್ಲ. ನಾನು ಅಧಿಕಾರದಲ್ಲಿದ್ದಾಗ ಸ್ವಜನ ಪಕ್ಷಪಾತ ಮಾಡಿಲ್ಲ ಮತ್ತು ಕಾನೂನು ಬಾಹಿರವಾಗಿ ಯಾವುದೇ ನಿರ್ಧಾರಗಳನ್ನ ಕೈಗೊಂಡಿಲ್ಲ. ದೂರುದಾರರು ಮಾಡಿರುವ ಎಲ್ಲಾ ಆರೋಪಗಳು ನಿರಾಧಾರವಾಗಿದೆ.
ಮುಡಾ ನಿವೇಶನ ಪಡೆದಿರುವ ಸಂಬಂಧ ಅಧಿಕಾರ ದುರ್ಬಳಕೆ ಮಾಡಿಲ್ಲ. ನ್ಯಾಯ ಸಮ್ಮತವಾಗಿ ನನ್ನ ಕುಟುಂಬ ನಿವೇಶನ ಪಡೆದಿದ್ದು ಯಾವುದೇ ರೀತಿಯಲ್ಲಿ ಕಾನೂನುಬಾಹಿರವಾಗಿ ನಿವೇಶನ ಪಡೆದಿಲ್ಲ. ಮುಖ್ಯ ಕಾರ್ಯದರ್ಶಿ ನೀಡಿರುವ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಬಹುದು. ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ನಾನು ಲೋಪವೆಸಗಿಲ್ಲ. ಆಧಾರ ರಹಿತ ಮಾಹಿತಿ ಆಧರಿಸಿ ನೋಟಿಸ್ ನೀಡಿರುವುದು ಸಮಂಜಸವಲ್ಲ. ದೂರುದಾರರ ಪೂರ್ವಾಪರಗಳ ಬಗ್ಗೆಯೂ ರಾಜ್ಯಕ್ಕೆ ಗೊತ್ತಿದೆ. ಪೂರ್ವಾಪರತೆಗಳನ್ನು ಅರೆಯದೇ ನೋಟಿಸ್ ನೀಡಿರುವುದು ಸರಿಯಲ್ಲ. ಹೀಗಾಗಿ ಪ್ರಾಸಿಕ್ಯೂಷನ್ ಅನುಮತಿಗೆ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು.