ಬೆಂಗಳೂರು :
ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ವಿರುದ್ಧ ಗವರ್ನರ್ ಗೆ ದೂರೊಂದು ಸಲ್ಲಿಕೆಯಾಗಿದೆ. ಈ ದೂರನ್ನು ಖುದ್ದು ಸಚಿವ ಆರ್ ಬಿ ತಿಮ್ಮಾಪೂರ್ ಅವರೇ ದೃಢಪಡಿಸಿದ್ದಾರೆ. ಆದರೆ, ದೂರಿನಲ್ಲಿನ ಅಂಶಗಳನ್ನು ಅವರು ಅಲ್ಲಗಳೆದಿದ್ದಾರೆ.
ಆದಾಗ್ಯೂ, ಗವರ್ನರ್, ಸಿಎಸ್, ಆರ್ಥಿಕ ಇಲಾಖೆ ಎಸಿಎಸ್ ಸೇರಿ ಹಲವರಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಸ್ಫೋಟಕ ಅಂಶಗಳಿವೆ. ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದ್ದು, ಅಬಕಾರಿ ಇಲಾಖೆಯಲ್ಲಿ ಬಹುಕೋಟಿ ಟ್ರಾನ್ಸ್ ಫರ್ ಹಗರಣ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಎಲೆಕ್ಷನ್ ಹೆಸರಲ್ಲಿ ನಿಯಮಬಾಹಿರವಾಗಿ ವರ್ಗಾವಣೆ ಪಟ್ಟಿ ರೆಡಿಯಾಗಿದೆ. ಒಟ್ಟು 13 ಅಬಕಾರಿ ಡಿಸಿಗಳು, 9 ಸೂಪರ್ ಇಂಟೆಂಡೆಂಟ್ ಗಳು ಹಾಗೂ 13 ಡಿವೈಎಸ್ಇ ಗಳು ಹಾಗೂ 20 ಅಬಕಾರಿ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗಾಗಿ ಬರೋಬ್ಬರಿ 18 ಕೋಟಿ ಸಂಗ್ರಹಿಸಲಾಗಿದೆ. ಈ ಪೈಕಿ 13 ಕೋಟಿ ರೂ ಹಣ ಸಚಿವ ತಿಮ್ಮಾಪೂರ್ ಅವರಿಗೆ ತಲುಪಿದೆ ಎಂದು ಆರೋಪಿಸಲಾಗಿದೆ. ಯಾರ್ಯಾರಿಂದ ಹಣ ಪಡೆಯಲಾಗಿದೆ ಎಂದು ಹೆಸರು ಸಮೇತ ಪಟ್ಟಿಯನ್ನು ನೀಡಲಾಗಿದೆ. ಅಬಕಾರಿ ಇನ್ಸ್ಪೆಕ್ಟರ್ ಗಳಿಂದ ತಲಾ 30 ರಿಂದ 40 ಲಕ್ಷ, ಸೂಪರಿಟೆಂಡೆಂಟ್ ವರ್ಗಾವಣೆಗೆ 25 ರಿಂದ 35 ಲಕ್ಷ ರೂ ಹಾಗೂ ಅಬಕಾರಿ ಡಿಸಿಗಳ ವರ್ಗಾವಣೆಗೆ 2.5 ರಿಂದ 3 ಕೋಟಿ ರೂ ಡೀಲ್ ನಡೆದಿದೆ. ಇಲ್ಲಿ ಅಕ್ರಮ ಹಣ ವಹಿವಾಟು ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಈ ಹಣವನ್ನು ಎಲೆಕ್ಷನ್ ಉದ್ದೇಶಕ್ಕಾಗಿ ಸಂಗ್ರಹ ಮಾಡಲಾಗ್ತಿದ್ದು, ಇದನ್ನು ಕೂಡಲೇ ತಡೆಯುವಂತೆ ರಾಜ್ಯಪಾಲರು ಹಾಗೂ ಸಿಎಸ್ ಗೆ ಮನವಿ ಮಾಡಲಾಗಿದೆ. ಸಚಿವರ ಪಿಎ, ಕಾರ್ಯದರ್ಶಿಗಳನ್ನು ನೇರವಾಗಿ ಹೊಣೆ ಮಾಡಲಾಗಿದೆ.
ಅಬಕಾರಿ ಇನ್ಸೆಪೆಕ್ಟರ್ ಗಳು ಒಂದೇ ಸ್ಥಳದಲ್ಲಿ 4 ವರ್ಷ ಕಾರ್ಯನಿರ್ವಹಿಸಬಹುದು. ಅಬಕಾರಿ ಡಿಸಿಗಳು ಒಂದೇ ಸ್ಥಳದಲ್ಲಿ 2 ವರ್ಷ ಕೆಲಸ ಮಾಡಬಹುದು. ಆದ್ರೆ, ಅವಧಿಗೆ ಮುನ್ನವೇ ಲಂಚ ಪಡೆದು ಅಧಿಕಾರಿಗಳ ವರ್ಗಾವಣೆ ಮಾಡಲಾಗ್ತಿದೆ. ಹಣ ಕೊಟ್ಟರಷ್ಟೆ ಆಯಕಟ್ಟಿನ ಹುದ್ದೆ, ಇಲ್ಲದಿದ್ದರೆ ಡಿಸ್ಟಿಲರಿಗಳಿಗೆ ವರ್ಗಾವಣೆ ಮಾಡಲಾಗ್ತಿದೆ. ಕಳೆದ ವರ್ಷ ವರ್ಗಾವಣೆ ಅವಧಿ ಮುಗಿದರೂ 400 ಅಧಿಕಾರಿಗಳ ಟ್ರಾನ್ಸ್ ಫರ್ ಆಗಿತ್ತು. 200ಕ್ಕೂ ಅಧಿಕ ಅಧಿಕಾರಿಗಳಿಗೆ ಅವಧಿಗೂ ಮುನ್ನವೇ ವರ್ಗಾವಣೆ ಶಿಕ್ಷೆಗೆ ಗುರಿಪಡಿಸಲಾಗಿತ್ತು ಎಂದು ವಿವರವಾದ ದೂರಿನಲ್ಲಿ ತಿಳಿಸಲಾಗಿದೆ. ಲೋಕಾಯುಕ್ತರು, ವಿಪಕ್ಷ ನಾಯಕರಿಗೂ ದೂರು ರವಾನೆ ಮಾಡಲಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದ ಎಚ್ ನಾಗೇಶ್ ಅವರ ವಿರುದ್ಧವೂ ಇಂಥದ್ದೇ ದೂರು ಪ್ರಧಾನ ಕಾರ್ಯಾಲಯಕ್ಕೆ ಸಲ್ಲಿಕೆಯಾಗಿತ್ತು. ನಂತರ ನಡೆದ ಬೆಳವಣಿಗೆಗಳಲ್ಲಿ ನಾಗೇಶ್ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.